ಕರ್ನಾಟಕ

ಕೊರೊನಾಗಿಂತ ಅಧಿಕ ಬಲಿ ಪಡೆಯಲಿದೆ ಸುದೀರ್ಘ ಲಾಕ್‌ಡೌನ್‌!: ನಾರಾಯಣಮೂರ್ತಿ

Pinterest LinkedIn Tumblr


ಬೆಂಗಳೂರು: ಮಾರಕ ಕೊರೊನಾ ವೈರಸ್‌ ತಡೆಯಲು ಲಾಕ್‌ಡೌನ್‌ ಜಾರಿ ಮಾಡಿರುವುದೇನೋ ಸರಿ. ಆದರೆ, ಲಾಕ್‌ಡೌನ್‌ ಹೀಗೆಯೇ ಮುಂದುವರಿದರೆ ಕೊರೊನಾಗೆ ಬಲಿಯಾಗುವವರ ಸಂಖ್ಯೆಗಿಂತಲೂ ಹಸಿವಿನಿಂದಲೇ ಹೆಚ್ಚು ಸಾವುಗಳು ಸಂಭವಿಸಬಹುದು ಎಂದು ಇನ್ಫೋಸಿಸ್‌ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಕಳವಳಗೊಂಡಿದ್ದಾರೆ.

ಕೊರೊನಾ ವೈರಸ್‌ ಒಂದು ಹೊಸ ಸಾಮಾನ್ಯ ಸೋಂಕು ಎಂದು ಭಾರತ ಒಪ್ಪಿಕೊಳ್ಳಬೇಕು. ಸೋಂಕನ್ನು ತಾಳಿಕೊಳ್ಳಬಲ್ಲ ಸಮರ್ಥರನ್ನು ಕೆಲಸ ಮಾಡಲು ಅವಕಾಶ ನೀಡಬೇಕು. ಇದರಿಂದ ದುರ್ಬಲರಿಗೆ ರಕ್ಷಣೆ ನೀಡಲು ಸಾಧ್ಯ ಎಂದು ಹೇಳಿದ್ದಾರೆ.

ಭಾರತದಂತಹ ದೇಶದಲ್ಲಿ ಲಾಕ್‌ಡೌನ್‌ ಹೆಚ್ಚು ಕಾಲ ಮುಂದುವರಿಯಲು ಸಾಧ್ಯವಿಲ್ಲ. ಇದು ಹೀಗೆಯೇ ಮುಂದುವರಿದರೆ, ಇನ್ನು ಕೆಲವೇ ದಿನಗಳಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆಯೇ ಕೊರೊನಾ ಸೋಂಕಿನಿಂದಾಗುವ ಸಾವಿಗಿಂತ ಹಲವು ಪಟ್ಟು ಹೆಚ್ಚಿರಲಿದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಕೊರೊನಾ ವೈರಸ್‌ನಿಂದ ಸಂಭವಿಸುವ ಸಾವಿನ ದರ ಶೇ. 0.25-0.5 ರಷ್ಟಿದೆ. ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಈ ಪ್ರಮಾಣ ಅತಿ ಕಡಿಮೆ ಇದೆ. ಇದುವರೆಗೆ ಲಾಕ್‌ಡೌನ್‌ ಜಾರಿ ಮಾಡಿರುವುದರಿಂದ ದೇಶದ ಹಲವಾರು ಸ್ಥಳಗಳಲ್ಲಿ ಲಾಕ್‌ಡೌನ್‌ ಹರಡುವಿಕೆಯನ್ನು ನಿಯಂತ್ರಿಸಲಾಗಿದೆ. ಮೇ 3 ರವರೆಗೆ ಲಾಕ್‌ಡೌನ್ ವಿಸ್ತರಿಸಲಾಗಿದೆ. ಭಾರತದಲ್ಲಿ 31,000 ಕ್ಕೂ ಹೆಚ್ಚು ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಜನವರಿ 30ರಂದು ದೇಶದಲ್ಲಿ ಮೊದಲ ಕೊರೊನಾ ವೈರಸ್‌ ಪ್ರಕರಣ ಪತ್ತೆಯಾಗಿತ್ತು. ಇದುವರೆಗೆ 1000 ಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಭಾರತದಲ್ಲಿ ಹಲವು ರೋಗಗಳ ಕಾರಣದಿಂದಾಗಿ ವಾರ್ಷಿಕ 90 ಲಕ್ಷ ಸಾವುಗಳು ಸಂಭವಿಸುತ್ತವೆ. ಇದರಲ್ಲಿ ಶೇ.25ರಷ್ಟು ಸಾವುಗಳು ವಾಯುಮಾಲಿನ್ಯ ಸಂಬಂಧಿ ಕಾರಣದಿಂದಲೇ ಸಂಭವಿಸುತ್ತಿವೆ. ಕಾರಣ ದೇಶವು ವಿಶ್ವದಲ್ಲೇ ಹೆಚ್ಚು ಕಲುಷಿತವಾಗಿದೆ.

ದೇಶದಲ್ಲಿ ಪ್ರತಿವರ್ಷ ಸರಾಸರಿ 90 ಲಕ್ಷ ಜನ ಸಾಯುತ್ತಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಕೊರೊನಾ ವೈರಸ್‌ನಿಂದಾಗಿ 1,000 ಜನ ಬಲಿಯಾಗಿದ್ದಾರೆ. ಸಹಜ ಸಾವುಗಳಿಗೂ, ಕೊರೊನಾ ಸಾವುಗಳಿಗೂ ತಾಳೆ ಹಾಕಿದರೆ ಕೊರೊನಾ ಸಾವುಗಳು ಅತಿ ಕಡಿಮೆ ಎಂದೇ ಹೇಳಬಹುದು. ಹೀಗಾಗಿ ಕೊರೊನಾ ಸೋಂಕು ನಾವು ಅಂದುಕೊಂಡಿರುವಷ್ಟು ಭೀಕರವಲ್ಲ ಎಂದು ಹೇಳಿದ್ದಾರೆ.

ದೇಶದಲ್ಲಿ 1.9 ಕೋಟಿಯಷ್ಟು ಕಾರ್ಮಿಕರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಮತ್ತೆ ಕೆಲವರು ಸ್ವಯಂ ಉದ್ಯೋಗಿಗಳಾಗಿದ್ದಾರೆ. ಇಷ್ಟು ಬೃಹತ್‌ ಸಂಖ್ಯೆಯ ಉದ್ಯೋಗಿಗಳು ಲಾಕ್‌ಡೌನ್‌ ನಿಂದಾಗಿ ತಮ್ಮ ಜೀವನೋಪಾಯವನ್ನೇ ಕಳೆದುಕೊಂಡು ಕೂತಿದ್ದಾರೆ. ಲಾಕ್‌ಡೌನ್‌ ದೀರ್ಘಕಾಲದವರೆಗೆ ಮುಂದುವರಿದರೆ” ಒಂದು ಹೊತ್ತಿನ ಊಟಕ್ಕೂ ನೆಲೆ ಇಲ್ಲದಂತಾಗಿ ಕೂರುವಂತಾಗುತ್ತದೆ.

ಕಡಿಮೆ ಮರಣ ಪ್ರಮಾಣ
ಯುವಕರಲ್ಲಿ ಈ ಸೋಂಕು ಇದ್ದರೂ ಕೂಡ ಯಾವುದೇ ಲಕ್ಷಣಗಳು ಗೋಚರಿಸುವುದಿಲ್ಲ. ಭಾರತೀಯರ ಆನುವಂಶೀಯತೆ, ಇಲ್ಲಿನ ಬೆಚ್ಚನೆಯ ಹವಾಮಾನ ಅಥವಾ ವ್ಯಾಪಕವಾದ ಬಿಸಿಜಿ ವ್ಯಾಕ್ಸಿನೇಷನ್ ಕಾರಣದಿಂದಾಗಿ ಭಾರತದಲ್ಲಿ ಮರಣ ಪ್ರಮಾಣ ಕಡಿಮೆಯಾಗಿದೆ ಎಂದು ನಾರಾಯಣ ಮೂರ್ತಿ ಅವರು ಹಲವು ಅಂಶಗಳತ್ತ ಗಮನಸೆಳೆದಿದ್ದಾರೆ. ಈ ಕುರಿತು ಸಂಶೋಧನೆಗೂ ಕರೆ ನೀಡಿದ್ದಾರೆ.

ಹಿರಿಯರು ಮತ್ತು ಆರೋಗ್ಯ ಸಮಸ್ಯೆಗಳಿರುವವರು ಸಾಮಾಜಿಕ ಅಂತರ ಅನುಸರಿಸಲು ಮತ್ತು ಸುರಕ್ಷತಾ ಕ್ರಮ ಕೈಗೊಳ್ಳಲು ಸಹಾಯ ಮಾಡಬೇಕು. ಸಾಫ್ಟ್‌ವೇರ್‌ ಕಂಪನಿಗಳಲ್ಲಿ ಉದ್ಯೋಗಿಗಳು ಕೆಲಸ ನಿರ್ವಹಿಸುವಂತೆ ಹೇಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಕುರಿತೂ ಗಮನಸೆಳೆದಿದ್ದಾರೆ. “ಒಂದು ಶಿಫ್ಟ್‌ನಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನೇ ಮೂರು ಶಿಫ್ಟ್‌ಗಳಾಗಿ ವಿಂಗಡಿಸಬಹುದು. ಇದರಿಂದ ಸಾಮಾಜಿಕ ಅಂತರ ಅನುಸರಿಸಬಹುದು ಎಂದು ಹೇಳಿದರು.

Comments are closed.