ಕರ್ನಾಟಕ

ಕೊರೋನಾ: ಲಾಕ್’ಡೌನ್ ನಿಂದ ರಾಜ್ಯದ ಆರ್ಥಿಕ ಸ್ಥಿತಿ ಚಿಂತಾಜನಕ

Pinterest LinkedIn Tumblr


ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್’ನಿಂದಾಗಿ ರಾಜ್ಯದಲ್ಲಿ ಲಾಕ್’ಡೌನ್ ಘೋಷಣೆ ಮಾಡಲಾಗಿದ್ದು, ಇದರ ಪರಿಣಾಮ ಇದೀಗ ರಾಜ್ಯದ ಆರ್ಥಿಕ ಪರಿಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿದೆ. ಕಳೆದ ನಾಲ್ಕು ವಾರಗಳಿಂದ ಲಾಕ್’ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ರಾಜ್ಯದ ಬೊಕ್ಕಸಕ್ಕೆ ರೂ.10,000 ಕೋಟಿ ನಷ್ಟ ಎದುರಾಗಿದೆ.

ಆರ್ಥಿಕ ಸ್ಥಿತಿ ಸುಧಾರಿಸುವ ರಾಜ್ಯ ಸರ್ಕಾರ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಲಾಕ್’ಡೌನ್’ನ್ನು ಸಡಿಲಗೊಳಿಸಿದ್ದರೂ ಕೂಡ ಮತ್ತೆ ಆರ್ಥಿಕ ಸ್ಥಿತಿಯನ್ನು ತಹಬದಿಗೆ ತರುವುದು ಅಷ್ಟು ಸುಲಭವಾಗಿಲ್ಲ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಕೂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ರಾಜ್ಯದ ಆರ್ಥಿಕ ಸ್ಥಿತಿ ಸೂಕ್ತರೀತಿಯಲ್ಲಿಲ್ಲ ಎಂದು ಒಪ್ಪಿಕೊಂಡಿದ್ದರು. ಪ್ರಸುತ್ತ ರಾಜ್ಯ ಸರ್ಕಾರದ ಗುರಿ ಕೊರೋನಾ ವೈರಸ್ ಮಟ್ಟಹಾಕುವುದರತ್ತ ಇದ್ದು, ಈ ನಡುವೆ ಆರ್ಥಿಕ ಸ್ಥಿತಿ ಸುಧಾರಣೆ ಸರಿಪಡಿಸುವುದು ತ್ರಾಸದಾಯಕವಾಗಿದೆ. ಮಹಾಮಾರಿ ಮಟ್ಟಹಾಕುವುದರತ್ತ ಗಮನ ಹರಿಸಿರುವ ರಾಜ್ಯ ಸರಹ್ಕಾರ ಈಗಾಗಲೇ ಹಲವು ಕಾರ್ಯಗಳನ್ನು ಸ್ಥಗಿತಗೊಳಿಸಿದೆ. ಕೇವಲ ತುರ್ತು ಕಾರ್ಯಗಳನ್ನು ಮಾತ್ರ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.

ಒಂದು ತಿಂಗಳಿನಲ್ಲಿ ಜಿಎಸ್’ಟಿ ಸಂಗ್ರಹ ಸೇರಿ ರೂ.10,000 ಕೋಟಿ ಆದಾಯ ಬರಬಬೇಕಿತ್ತು. ಆದರೆ, ರಾಜ್ಯದಲ್ಲಿ ಪರಿಸ್ಥಿತಿ ಕೆಟ್ಟದಾಗಿರುವ ಹಿನ್ನೆಲೆಯಲ್ಲಿ ನಷ್ಟ ಎದುರಾಗಿದೆ ಎಂದು ರಾಜ್ಯ ಸರ್ಕಾರದ ಜಿಎಸ್’ಟಿ ಮಂಡಳಿಯ ಸಲಹೆಗಾರ ಬಿ.ಟಿ,ಮನೋಹರ್ ಅವರು ಹೇಳಿದ್ದಾರೆ.

2019-20ನೇ ಸಾಲಿನ ಜಿಎಸ್‌ಟಿ ಮರುಪಾವತಿಯ ಅಂತಿಮ ಕಂತಿನ ನಿರೀಕ್ಷೆಯಲ್ಲಿದ್ದೇವೆ. ಇದು ಸುಮಾರು ರೂ. 4,500 ಕೋಟಿಯಷ್ಟು ಬರಬಹುದು ಎಂದು ತಿಳಿಸಿದ್ದಾರೆ.

ಈ ನಡುವೆ ಕೇಂದ್ರದಿಂದ ಕೂಡ ರಾಜ್ಯಕ್ಕೆ ಹಣ ಬರಬೇಕಿದೆ. ಈಗಾಗಲೇ ರಾಜ್ಯದ ಬೊಕ್ಕಸ ಖಾಲಿಯಾಗುತ್ತಿದೆ. ತೆರಿಗೆ ಸಂಗ್ರಹ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ವಿವಿಧ ಇಲಾಖೆಯಲ್ಲಿರುವ ಸಂಪನ್ಮೂಲಗಳನ್ನೇ ಸರ್ಕಾರ ಬಳಕೆ ಮಾಡಿಕೊಳ್ಳುತ್ತಿದ್ದು, ಪರಿಸ್ಥಿತಿ ಸುಧಾರಿಸುತ್ತಿದ್ದಂತೆಯೇ ಆಯಾ ಇಲಾಖೆಗೆ ಮರುಪಾವತಿ ಮಾಡಲಾಗುತ್ತದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

Comments are closed.