ರಾಷ್ಟ್ರೀಯ

ಕೊರೊನಾ ಬಗ್ಗುಬಡಿಯಲು ಬಳಸಿದ ಅಸ್ತ್ರ ಪ್ಲಾಸ್ಮಾ ಥೆರಪಿ ಭಾರತದಲ್ಲಿ ಯಶಸ್ವಿ!

Pinterest LinkedIn Tumblr


ನವದೆಹಲಿ: ಮಾರಣಾಂತಿಕ ಕೋವಿಡ್-19ಗೆ ತಕ್ಕ ಲಸಿಕೆ ಅಥವಾ ಔಷಧಿ ಇನ್ನೂ ಸಿದ್ಧವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೊರೊನಾ ವೈರಸ್ ಅನ್ನು ಬಗ್ಗುಬಡಿಯಲು ರೋಗ ಗೆದ್ದವರ ರಕ್ತವನ್ನೇ ಮದ್ದಾಗಿ ಬಳಕೆ ಮಾಡಿಕೊಳ್ಳುವ ಪ್ರಕ್ರಿಯೆಗೆ ಭಾರತದಲ್ಲಿ ಚಾಲನೆ ನೀಡಲಾಗಿದೆ.

ಕೊರೊನಾ ವೈರಸ್ ವಿರುದ್ಧ ಹೋರಾಡಿ, ಸೋಂಕು ಗೆದ್ದು ಬಂದವರ ರಕ್ತದಲ್ಲಿ ಇರುವ ಶಕ್ತಿಯುತ ಪ್ಲಾಸ್ಮಾ ಕಣಗಳನ್ನು ರೋಗಿಗಳಿಗೆ ನೀಡಲಾಗುತ್ತಿದೆ. ಆ ಮೂಲಕ ರೋಗಿಗಳಲ್ಲಿ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುವ ಪ್ರಯೋಗಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ಸಾಕ್ಷಿ ಆಗಿತ್ತು.

ವಿವಿಧ ದೇಶಗಳಲ್ಲಿ ಈ ಪ್ಲಾಸ್ಮಾ ಥೆರಪಿ ಯಶಸ್ವಿಯಾದ ಬಳಿಕ, ದೆಹಲಿಯ 49 ವರ್ಷ ವಯಸ್ಸಿನ ಕೊರೊನಾ ಸೋಂಕಿತ ಮೇಲೆ ಮೊದಲ ಬಾರಿಗೆ ಪ್ರಯೋಗ ಮಾಡಲಾಗಿತ್ತು. ವೆಂಟಿಲೇಟರ್ ನಲ್ಲಿದ್ದ ಆ ವ್ಯಕ್ತಿಯ ದೇಹದೊಳಗೆ ರೋಗ ಗೆದ್ದವರ ಪ್ಲಾಸ್ಮಾ ಕಣಗಳು ಸೇರಿಸಲಾಗಿತ್ತು. ಇದಾದ ಮೇಲೆ ನಡೆದಿದ್ದು ಅಚ್ಚರಿ. ಸಾವಿನ ಮನೆಯ ಬಾಗಿಲು ತಟ್ಟುತ್ತಿದ್ದ ಆ ವ್ಯಕ್ತಿಯ ದೇಹದೊಳಗೆ ಪ್ಲಾಸ್ಮಾ ಕಣಗಳು ಸೇರಿದ್ದೇ ತಡ, ಆತನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

ಭಾರತದಲ್ಲಿ Convalescent ಪ್ಲಾಸ್ಮಾ ಥೆರಪಿಗೆ ಒಳಗಾದ ಮೊಟ್ಟಮೊದಲ ಪೇಷೆಂಟ್ ಸಂಪೂರ್ಣವಾಗಿ ಗುಣಮುಖರಾಗಿ, ಮನೆಗೆ ತೆರಳಿದ್ದಾರೆ. ನಿನ್ನೆ ಭಾನುವಾರ (ಏಪ್ರಿಲ್ 26) ಸಾಕೇತ್ ನ ಮ್ಯಾಕ್ಸ್ ಆಸ್ಪತ್ರೆಯಿಂದ 49 ವರ್ಷ ವ್ಯಕ್ತಿ ಡಿಸ್ಚಾರ್ಜ್ ಆಗಿದ್ದಾರೆ. ಏಪ್ರಿಲ್ 4 ರಂದು ಆ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ಕೊರೊನಾ ವೈರಸ್ ಸೋಂಕು ತಗುಲಿದ ಬಳಿಕ 49 ವರ್ಷದ ಆ ವ್ಯಕ್ತಿಯಲ್ಲಿ ಉಸಿರಾಟ ಸಮಸ್ಯೆ ಕಂಡು ಬಂದಿತ್ತು. ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾದ ಆ ವ್ಯಕ್ತಿಯ ಆರೋಗ್ಯ ಸ್ಥಿತಿ ದಿನೇ ದಿನೇ ಕ್ಷೀಣಿಸುತ್ತಿತ್ತು. ನ್ಯೂಮೋನಿಯಾದಿಂದ ಬಳಲಿದ ವ್ಯಕ್ತಿಯನ್ನು ಏಪ್ರಿಲ್ 8 ರಿಂದ ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಆ ವ್ಯಕ್ತಿಗೆ ಪ್ಲಾಸ್ಮಾ ಥೆರಪಿ ನೆರವೇರಿಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದರು.

ಈ ಹಿಂದೆ ಕೋವಿಡ್-19 ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದವರು ಪ್ಲಾಸ್ಮಾ ದಾನ ಮಾಡಲು ಮುಂದಾದರು. ಬಳಿಕ 49 ವರ್ಷದ ವ್ಯಕ್ತಿ ಮೇಲೆ ಪ್ಲಾಸ್ಮಾ ಥೆರಪಿ ಪ್ರಯೋಗವನ್ನು ಆಸ್ಪತ್ರೆಯ ವೈದ್ಯರು ನೆರವೇರಿಸಿದರು. ಪ್ಲಾಸ್ಮಾ ಥೆರಪಿ ಪ್ರಕ್ರಿಯೆ ಬಳಿಕ ಸೋಂಕಿತನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಏಪ್ರಿಲ್ 18 ರಂದು ವೆಂಟಿಲೇಟರ್ ನಿಂದ ಹೊರಗೆ ಬಂದ ಆ ವ್ಯಕ್ತಿ, ನಿನ್ನೆ ಆಸ್ಪತ್ರೆಯಿಂದ ಹೊರ ನಡೆದರು.

ಕೋವಿಡ್-19 ರೋಗ ಗೆದ್ದವರು 400ml ಪ್ಲಾಸ್ಮಾ ದಾನ ಮಾಡಬಹುದಾಗಿದ್ದು, ಇದರಿಂದ ಇಬ್ಬರ ಜೀವ ಉಳಿಯಲಿದೆ. ಓರ್ವ ರೋಗಿಯ ಚಿಕಿತ್ಸೆಗೆ 200ml ಪ್ಲಾಸ್ಮಾ ಸಾಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದರು.

Comments are closed.