ಕರ್ನಾಟಕ

ಮಂಗನ ಕಾಯಿಲೆ ಚಿಕಿತ್ಸೆಗೆ ಆಯುಷ್ಮಾನ್‌ ಭಾರತ – ಆರೋಗ್ಯ ಕರ್ನಾಟಕದಿಂದ ಪ್ಯಾಕೇಜ್‌

Pinterest LinkedIn Tumblr

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಾಣಿಸಿಕೊಂಡಿರುವ ಕೆಎಫ್‌ಡಿ/ಮಂಗನ ಕಾಯಿಲೆ ಚಿಕಿತ್ಸೆಗಾಗಿ ಆಯುಷ್ಮಾನ್‌ ಭಾರತ – ಆರೋಗ್ಯ ಕರ್ನಾಟಕ ಚಿಕಿತ್ಸಾ ಪ್ಯಾಕೇಜ್‌ ಅಳವಡಿಸಿಕೊಳ್ಳಬಹುದೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ತಿಳಿಸಿದೆ.

ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಭಾಗದಲ್ಲಿ ಕಾಣಿಸಿಕೊಂಡಿದ್ದ ಮಂಗನ ಕಾಯಿಲೆಯು ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿಯೂ ಪತ್ತೆಯಾಗಿದೆ. ಇದು ಡೆಂಗಿ ಹಾಗೂ ಇತರೆ ಕಾಯಿಲೆಗಳ ರೀತಿ ಇರುವುದರಿಂದ ಮಕ್ಕಳು ಮತ್ತು ವಯಸ್ಕರನ್ನು ಒಳಗೊಂಡಂತೆ ಚಿಕಿತ್ಸಾ ಪ್ಯಾಕೇಜ್‌ಗಳನ್ನು ಆರಂಭಿಸಬೇಕಾಗಿದೆ. ಈ ಕಾಯಿಲೆಯ ಚಿಕಿತ್ಸಾ ಸಮಯದಲ್ಲಿ ಅವಶ್ಯವಿರುವ ವೈರಾಣು ಪರೀಕ್ಷೆ ಮತ್ತು ಇತರೆ ಪರೀಕ್ಷೆಗಳಿಗಾಗಿ ಚಿಕಿತ್ಸಾ ವೆಚ್ಚದ ಪ್ಯಾಕೇಜ್‌ ಘೋಷಿಸಲಾಗಿದೆ. ತೀವ್ರತರವಾದ ಮಂಗನ ಕಾಯಿಲೆಯಲ್ಲಿ ಐಸಿಯು ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಅಂಗಾಂಗ ವೈಫಲ್ಯ ಸಂಭವ ಇದ್ದಲ್ಲಿ ಹೆಚ್ಚುವರಿ ಔಷಧಿ ಹಾಗೂ ಚಿಕಿತ್ಸಾ ಸೌಲಭ್ಯಕ್ಕಾಗಿ ಗರಿಷ್ಟ ಮಿತಿ ನಿಗದಿಪಡಿಸಲಾಗಿದೆ. ಈ ಸಂಯೋಜಿತ ಯೋಜನೆಯಲ್ಲಿ ಇರುವ ಇತರೆ ಪ್ಯಾಕೇಜ್‌ಗಳೊಂದಿಗೆ ಹೆಚ್ಚುವರಿ ಪರೀಕ್ಷೆಗಳಿದ್ದಲ್ಲಿ ಪೂರ್ವಾನುಮತಿಯೊಂದಿಗೆ ಪಡೆಯಬಹುದಾಗಿದೆ.

ಮಂಗನ ಕಾಯಿಲೆ ಹರಡುವಿಕೆ ತಡೆ, ವ್ಯಾಕ್ಸಿನ್‌ ಸುಧಾರಣೆಗೆ ಕಟ್ಟುನಿಟ್ಟಿನ ಸೂಚನೆ
ಈ ಪ್ಯಾಕೇಜ್‌ಗಳನ್ನು ತುರ್ತು ಸಂದರ್ಭದ ಚಿಕಿತ್ಸಾ ಪ್ಯಾಕೇಜ್‌ಗಳೆಂದು ಗುರುತಿಸಿರುವ ಕಾರಣ ನೇರವಾಗಿ ಸಾರ್ವಜನಿಕ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಈ ಆಸ್ಪತ್ರೆಗಳು ತ್ವರಿತವಾಗಿ ಚಿಕಿತ್ಸೆ ಪ್ರಾರಂಭಿಸಿ ಆ ನಂತರ ಪೂರ್ವಾನುಮತಿ ಪಡೆಯಬಹುದಾಗಿದೆ. ಕ್ಲೇಮ್ಸ್‌ ಸಲ್ಲಿಸುವ ಸಂದರ್ಭದಲ್ಲಿ ವೈರಾಣು ಮತ್ತು ಇತರೆ ಪರೀಕ್ಷೆಗಾಗಿ ಪೂರ್ವಾನುಮತಿ ಪಡೆದಿದ್ದಲ್ಲಿ ಹಾಗೂ ತೀವ್ರತರವಾದ ಚಿಕಿತ್ಸೆಗಾಗಿ ಐಸಿಯುಗಳಲ್ಲಿ ಹೆಚ್ಚುವರಿ ಔಷಧಿ ಪರಿಕರಗಳನ್ನು ಉಪಯೋಗಿಸಿದ್ದಲ್ಲಿ ಸೂಕ್ತ ದಾಖಲಾತಿಗಳನ್ನು ಲಗತ್ತಿಸಬೇಕಾಗಿದೆ. ಈ ಪ್ಯಾಕೇಜ್‌ ಮಂಗನ ಕಾಯಿಲೆ ಪ್ರಚಲಿತವಿರುವ ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ ಎಂದು ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕರು ತಿಳಿಸಿದ್ದಾರೆ.
ಪ್ಯಾಕೇಜ್‌ ವಿವರ
ಕ್ರ. ಸಂ.
ಪ್ಯಾಕೇಜ್‌
ವಿವರ
ಬೆಲೆ
1
ಶಂಕಿತ ಕೆಎಫ್‌ಡಿ
ವಾರ್ಡ್‌, ಚಿಕಿತ್ಸಾ ವೆಚ್ಚ
ದಿನಕ್ಕೆ 1800 ರೂ.
2
ಕೆಎಫ್‌ಡಿ ನಾನ್‌ ಕಾಂಪ್ಲಿಕೇಟೆಡ್
ವಾರ್ಡ್‌ ವೆಚ್ಚ ಎಚ್‌ಡಿಯು
ದಿನಕ್ಕೆ 2700 ರೂ.
ಲ್ಯಾಬ್‌ ಇನ್ವೆಸ್ಟಿಗೇಷನ್ಸ್
ವೈರಲ್‌ ಟೆಸ್ಟ್‌ ಮತ್ತು ರೋಟಿನ್‌ ಟೆಸ್ಟ್
2000 ರೂ. ಮಿತಿ
3
ಕೆಎಫ್‌ಡಿ ಕಾಂಪ್ಲಿಕೇಟೆಡ್‌
ಐಸಿಯು ವೆಚ್ಚ
ದಿನಕ್ಕೆ 4500 ರೂ.
ಲ್ಯಾಬ್‌ ಇನ್ವೆಸ್ಟಿಗೇಷನ್ಸ್
ವೈರಲ್‌ ಟೆಸ್ಟ್‌ ಮತ್ತು ರೋಟಿನ್‌ ಟೆಸ್ಟ್
2000 ರೂ. ಮಿತಿ
ಹೆಚ್ಚುವರಿ ಔಷಧಿ ವೆಚ್ಚ
ಪ್ಯಾಕೇಜ್‌ನಲ್ಲಿದ್ದ ಔಷಧಿಗಿಂತ ಇತರೆ
2000ರೂ. ಮಿತಿ
ಹೆಚ್ಚುವರಿ ಅತ್ಯಾಧುನಿಕ ರೆಡಿಯೋಲಾಜಿಕಲ್‌ ಇನ್ವೆಸ್ಟಿಗೇಷನ್
ಸಿಟಿ, ಎಂಆರ್‌ಐ, ಬ್ಲಡ್‌ ಟ್ರಾನ್ಸ್‌ಫ್ಯುಸನ್
ಒಮ್ಮೆಗೆ 5 ಸಾವಿರ ರೂ.

Comments are closed.