ಮೈಸೂರು: ಏಪ್ರಿಲ್ 14ರ ಬಳಿಕ ಮೈಸೂರು ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಲಾಕ್‌ಡೌನ್ ಮುಂದುವರಿಸುವ ಅನಿವಾರ್ಯತೆ ಇದೆ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಸೋಂಕು ಹತೋಟಿಗೆ ಬರುತ್ತಿಲ್ಲ. ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕಿತರ ಸಂಖ್ಯೆ ಆತಂಕ ಉಂಟು ಮಾಡುತ್ತಿದೆ. ಹಾಗಾಗಿ ಏಪ್ರಿಲ್ 14ರ ನಂತರವೂ ಲಾಕ್‌ಡೌನ್ ಮುಂದುವರೆಸುವ ಬಗ್ಗೆ ಸರಕಾರ ಗಂಭೀರವಾಗಿ ಚಿಂತನೆ ನಡೆಸಲಿದೆ. ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳ ಜೊತೆ ಈ ಬಗ್ಗೆ ಸಮಗ್ರವಾಗಿ ಚರ್ಚಿಸುತ್ತೇವೆ ಎಂದು ಅವರು ಹೇಳಿದರು.
ಮೈಸೂರು ಜಿಲ್ಲೆಯನ್ನು ರೆಡ್ ಜೋನ್ ಎಂದು ಘೋಷಿಸಲಾಗಿದೆ. ಸೋಂಕು ಹರಡಿದ ಜ್ಯುಬಿಲಿಯಂಟ್ ಕಾರ್ಖಾನೆ ಬಗ್ಗೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಅದೇ ಕಾರ್ಖಾನೆಗೆ ನೋಟೀಸ್ ನೀಡಲಾಗಿದೆ. ವೈರಸ್ ಸಂಪೂರ್ಣ ಹತೋಟಿಗೆ ಬರುವವರೆಗೆ ಕಾರ್ಖಾನೆ ಸ್ಥಗಿತಕ್ಕೆ ಆದೇಶಿಸಲಾಗಿದೆ ಎಂದರು.
ಇದೇ ವೇಳೆ ಕೊರೊನಾ ಸೋಂಕಿತರು ಹಾಗೂ ಶಂಕಿತರಿಗೆ ವೈದ್ಯಕೀಯ ಸೇವೆ ನೀಡುತ್ತಿರುವ ವಿದ್ಯಾರ್ಥಿಗಳು ಸಚಿವರ ಎದುರು ತಮ್ಮ ಸಮಸ್ಯೆಯನ್ನು ಹೊರಹಾಕಿದರು. ನಾವು ಬಳ್ಳಾರಿಯಿಂದ ಮೈಸೂರಿಗೆ ಬಂದಿದ್ದೇವೆ. ತಿನ್ನಲು ಊಟ ಇಲ್ಲ. ಉಳಿದುಕೊಳ್ಳಲು ಪಿ.ಜಿ.ಯವರು ಅವಕಾಶ ನೀಡುತ್ತಿಲ್ಲ. ಕೊರೊನಾ ಕೆಲಸ ಮಾಡುವ ನಾವು ಎಲ್ಲಿಗೆ ಹೋಗಬೇಕು? ನಾವು ಸಹ ಹೆಂಡತಿ, ಮಕ್ಕಳು, ಅಪ್ಪ-ಅಮ್ಮರನ್ನು ನೋಡಿ ಎಷ್ಟೋ ದಿನಗಳಾಗಿದೆ. ನಮ್ಮನ್ನ ಐಸೋಲೇಷನ್ ಆಸ್ಪತ್ರೆಯಲ್ಲಿ ಕೆಲಸಕ್ಕೆ ಹಾಕುತ್ತಿದ್ದಾರೆ. ಒಂದು ವಾರ ಡ್ಯೂಟಿ ಮುಗಿಸಿ ಬಂದರೆ ಎರಡು ವಾರ ಕ್ಯಾರಂಟೈನ್‌ನಲ್ಲಿ ಇರಬೇಕು. ಕ್ವಾರಂಟೈನ್ ಮುಗಿಸಿ ಬಂದರೆ ನಮಗೆ ಪಿ.ಜಿ. ಸಿಗುತ್ತಿಲ್ಲ. ಆದ್ದರಿಂದ ಮೂಲ ಸೌಕರ್ಯ ಒದಗಿಸಿ, ಸಂಬಳ ಕೊಡಿ ಎಂದು ಸಚಿವರ ಮುಂದೆ ಮನವಿ ಮಾಡಿದರು.
ಇದಕ್ಕೆ ಕೂಡಲೇ ಸ್ಪಂದಿಸಿದ ಸಚಿವ ಶ್ರೀರಾಮುಲು, “ಊಟ, ವಸತಿ ಸೌಲಭ್ಯವನ್ನು ಜಿಲ್ಲಾಧಿಕಾರಿಗಳು ಕಲ್ಪಿಸುತ್ತಾರೆ. ಸಂಬಳ ಕೊಡಿಸುವುದು ನನ್ನ ಜವಾಬ್ದಾರಿ,” ಎಂಬ ಭರಸವೆ ನೀಡಿದರು.
Comments are closed.