ಬೆಂಗಳೂರು: ಕರ್ನಾಟಕದಲ್ಲಿ ಇಂದು ರಾಜ್ಯದ ಮೊದಲ ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿದೆ. ಅಮೆರಿಕಾದಿಂದ ಬಂದ ಬೆಂಗಳೂರಿನ ಸಾಫ್ಟ್‍ವೇರ್ ಇಂಜಿನಿಯರ್ ತಪಾಸಣೆ ವೇಳೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ. ಇಂದು ವಿಕಾಸಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ಕೊರೊನಾ ಸೋಂಕು ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಅಮೆರಿಕದಿಂದ ಬೆಂಗಳೂರಿಗೆ ಬಂತು ಕೊರೊನಾ!: ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಇಡೀ ಕುಟುಂಬವನ್ನು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮೆರಿಕದಿಂದ ಬಂದಿದ್ದ ಸಾಫ್ಟ್‍ವೇರ್ ಇಂಜಿನಿಯರ್‍ಗೆ ಕೊರೊನ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಾರ್ಚ್ 1 ರಂದು ಟೆಕ್ಕಿ ಅಮೆರಿಕದಿಂದ ಬಂದಿದ್ದರು. ಕೊರೊನಾ ಪೀಡಿತ ವ್ಯಕ್ತಿ, ಅವರ ಪತ್ನಿ, ಮಗಳು ಹಾಗೂ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು. ಮಾರ್ಚ್ 1 ರಂದು ಟೆಕ್ಕಿ ಪ್ರಯಾಣ ಮಾಡಿದ ವಿಮಾನದ ಸಹ ಪ್ರಯಾಣಿಕರನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಕರ್ನಾಟಕ ಮೂಲದ ವ್ಯಕ್ತಿ ಅಮೆರಿಕಾದಿಂದ ಬಂದಿದ್ದಾರೆ ಎಂದು ಸುಧಾಕರ್ ಮಾಹಿತಿ ನೀಡಿದರು.
ಸುಮಾರು 40 ವರ್ಷ ವಯಸ್ಸಿನ ಟೆಕ್ಕಿ ಅಮೆರಿಕದಿಂದ ಮಾರ್ಚ್ 1ರಂದು ಬೆಳಿಗ್ಗೆ 8.45ಕ್ಕೆ ಬೆಂಗಳೂರಿಗೆ ಬಂದಿದ್ದಾರೆ. ಸೋಂಕಿತ ವ್ಯಕ್ತಿ, ಪತ್ನಿ ಮತ್ತು ಒಂದು ಮಗು ಜೊತೆ ಡ್ರೈವರ್ ಎಲ್ಲರನ್ನೂ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡುತ್ತಿದ್ದೇವೆ. ಅವರು ಪ್ರಯಾಣ ಬೆಳೆಸಿದ ವಿಮಾನದಲ್ಲಿ ಅವರ ಅಕ್ಕಪಕ್ಕ ಕುಳಿತಿದ್ದ ವ್ಯಕ್ತಿಗಳ ಬಗ್ಗೆಯೂ ಗಮನ ಹರಿಸುತ್ತಿದ್ದೇವೆ ಎಂದು ಸುಧಾಕರ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಸಚಿವ ಸುಧಾಕರ್, ಕೇಂದ್ರ ಆರೋಗ್ಯ ಸಚಿವರ ಜೊತೆ ವೀಡಿಯೋ ಕಾನ್ಫರೆನ್ಸ್ ಮಾಡಿದರು. ವೀಡಿಯೋ ಕಾನ್ಫರೆನ್ಸ ನಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಸಭೆಯಲ್ಲಿ ಕೊರೊನಾ ವೈರಸ್ ಹರಡದ ರೀತಿ ರಾಜ್ಯ ಆರೋಗ್ಯ ಇಲಾಖೆ ಮಾಡಿಕೊಂಡಿರುವ ಕ್ರಮದ ಬಗ್ಗೆ ಚರ್ಚೆ ನಡೆಯಿತು.
Comments are closed.