ಕರ್ನಾಟಕ

ಅಕ್ರಮ ಬಿಪಿಎಲ್ ಕಾರ್ಡ್ ಹಿಂದಿರುಗಿಸಲು ಏ.30 ಅಂತಿಮ ದಿನ!

Pinterest LinkedIn Tumblr


ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಅನುಕೂಲಸ್ಥರು ಅಥವಾ ಅನರ್ಹರು ಅಕ್ರಮವಾಗಿ ಪಡೆದ ಬಿಪಿಎಲ್ ಪಡಿತರ ಚೀಟಿಗಳನ್ನು ಏಪ್ರಿಲ್ 30 ರ ಒಳಗೆ ಸ್ವಯಂಪ್ರೇರಿತರಾಗಿ ವಾಪಸ್ ನೀಡಲು ಕಡೆಯ ಅವಕಾಶ ನೀಡಲಾಗಿದೆ. ಏಪ್ರಿಲ್ 30 ರ ನಂತರವೂ ಅನರ್ಹರು ಬಿಪಿಎಲ್ ಪಡಿತರ ಚೀಟಿಗಳನ್ನು ವಾಪಸ್ ಮಾಡದಿದ್ದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಖಾತೆ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯನ್ನು ಉದ್ಘಾಟಿಸಿದ ನಂತರ ಜಿಲ್ಲಾಡಳಿತ ಭವನದಲ್ಲಿ ಆಹಾರ ಇಲಾಖೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಈಗಾಗಲೇ ರಾಜ್ಯದಲ್ಲಿ ಸುಮಾರು 64 ಸಾವಿರ ಜನರು ಅಕ್ರಮವಾಗಿ ಪಡೆದಿದ್ದ ಬಿಪಿಎಲ್ ಪಡಿತರ ಚೀಟಿಗಳನ್ನು ಸ್ವಯಂಪ್ರೇರಿತರಾಗಿ ವಾಪಸ್ ಮಾಡಿದ್ದಾರೆ. ಸ್ವಯಂಪ್ರೇರಿತರಾಗಿ ವಾಪಸ್ ಮಾಡುವವರ ವಿರುದ್ಧ ಯಾವುದೇ ಕ್ರಮ ಜರುಗಿಸುವುದಿಲ್ಲ. ಆದರೆ, ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕಾರ್ಡ್ ವಶಪಡಿಸಿಕೊಂಡಲ್ಲಿ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಇದುವರೆಗೂ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅನರ್ಹ ಬಿಪಿಎಲ್ ಕಾರ್ಡ್‌ದಾರರಿಂದ ಒಟ್ಟು 96 ಲಕ್ಷ ರೂಪಾಯಿಗಳಷ್ಟು ದಂಡವನ್ನು ವಸೂಲಿ ಮಾಡಿದ್ದಾರೆ. ಸುಮಾರು 35 ಸಾವಿರ ಬಿಪಿಎಲ್ ಕಾರ್ಡ್‌ಗಳು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತನೆಯಾಗಿವೆ. ಸದ್ಯಕ್ಕೆ ನ್ಯಾಯಬೆಲೆಗಳ ಅಂಗಡಿಗಳ ಕಮೀಷನ್ ಹೆಚ್ಚಳದ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ. ಇಲಾಖೆಯಲ್ಲಿ ಶೇ.50 ರಷ್ಟು ಹುದ್ದೆಗಳು ಖಾಲಿಯಿದ್ದು, ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ.

ಈ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Comments are closed.