
ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವಹೇಳನಕಾರಿ ಹೇಳಿಕೆಗೆ ಕ್ಷಮೆ ಕೇಳಬೇಕು ಇಲ್ಲದಿದ್ದರೆ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ ಕಾಂಗ್ರೆಸ್ ನಾಯಕರು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಉಬಯ ಸದನದ ಬಾವಿಗಿಳಿಸಿದು ಪ್ರತಿಭಟನೆ ನಡೆಸಿದ್ದಾರೆ.
ಇಂದಿನಿಂದ ರಾಜ್ಯದ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಮಾರ್ಚ್5ಕ್ಕೆ ಸಿಎಂ ಯಡಿಯೂರಪ್ಪ ರಾಜ್ಯ ಬಜೆಟ್ ಮಂಡಿಸಲಿದ್ದು, ಇಂದು ರಾಜ್ಯಪಾಲರ ಭಾಷಣದ ಮೇಲೆ ಅವರು ನಿರ್ಣಯ ಮಂಡಿಸಲು ಮುಂದಾಗಿದ್ದರು. ಆದರೆ, ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಯತ್ನಾಳ್ ಹಾಗೂ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿರುವ ಸಿದ್ದರಾಮಯ್ಯ, “ಬಿಜೆಪಿ ಶಾಸಕ ಯತ್ನಾಳ್ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದು ಅಕ್ಷಮ್ಯ ಅಪರಾಧ. ಈ ಮೂಲಕ ಅವರು ದೊರೆಸ್ವಾಮಿ ಮಾತ್ರವಲ್ಲ, ಇಡೀ ಸ್ವಾತಂತ್ರ್ಯ ಹೋರಾಟದ ಚಳುವಳಿಯನ್ನೇ ಅವಹೇಳನ ಮಾಡಿದ್ದಾರೆ.
ಹೀಗಾಗಿ ಯತ್ನಾಳ್ ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರನ್ನು ಶಾಸಕ ಸ್ಥಾನದಿಂದಲೇ ಪದಚ್ಯುತಗೊಳಿಸಬೇಕು, ಪಕ್ಷದಿಂದಲೇ ಉಚ್ಛಾಟನೆ ಮಾಡಬೇಕು. ಸ್ಪೀಕರ್ ತಮ್ಮ ವಿಶೇಷ ಅಧಿಕಾರವನ್ನು ಬಳಸಿ ಶಾಸಕನನ್ನು ಪದಚ್ಯುತ ಮಾಡುವ ಅವಕಾಶ ಇದೆ. ಹೀಗಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಅಸ್ತ್ರವನ್ನು ಬಳಸಬೇಕು. ಈ ಕುರಿತು ಚರ್ಚೆಗೆ ನಿಲುವಳಿ ಮಂಡಿಸಬೇಕು” ಎಂದು ಒತ್ತಾಯಿಸಿದರು.
ಆದರೆ, ಈ ವೇಳೆ ಮಧ್ಯಪ್ರವೇಶ ಮಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, “ನಿಲುವಳಿ ಮಂಡಿಸಬೇಕು ಎಂಬ ಸಿದ್ದರಾಮಯ್ಯ ಅವರ ಕೋರಿಗೆಗೆ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಯಾವ ನಿಯಮಾವಳಿ ಅಡಿಯಲ್ಲಿ ಸಿದ್ದರಾಮಯ್ಯ ವಿಷಯ ಪ್ರಸ್ತಾಪಿಸುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ” ಎಂದು ಗುಡುಗಿದರು.
ಆದರೂ ಕಾಂಗ್ರೆಸ್ ನಾಯಕರು ತಮ್ಮ ಪ್ರತಿಭಟನೆಯನ್ನು ಮುಂದುವರೆಸುತ್ತಿದ್ದು, ಗಲಾಟೆ ಗದ್ದಲದ ನಡುವೆಯೇ ಸಿಎಂ ಯಡಿಯೂರಪ್ಪ ಸದನದಲ್ಲಿ ತಮ್ಮ ಭಾಷಣವನ್ನು ಮುಂದುವರೆಸಿದ್ದಾರೆ. ಇನ್ನೂ ಮಾರ್ಚ್ 05ರಂದು ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಯತ್ನಾಳ್-ದೊರೆಸ್ವಾಮಿ ಕೋಲಾಹಲದ ಬಿಸಿ ಬಜೆಟ್ ಕಲಾಪಕ್ಕೂ ತಟ್ಟಲಿದೆ ಎನ್ನಲಾಗುತ್ತಿದೆ.
Comments are closed.