ನವದೆಹಲಿ: ಕಳೆದ ವಾರ ಸಂಭವಿಸಿದ ದೆಹಲಿ ಹಿಂಸಾಚಾರದಲ್ಲಿ ಮನೆ ಕಳೆದುಕೊಂಡ ಯೋಧ ಮಹಮದ್ ಅನೀಸ್ ಗೆ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (ಬಿಎಸ್ಎಫ್) 10 ಲಕ್ಷ ರೂಗಳ ಆರ್ಥಿಕ ನೆರವು ನೀಡಿದೆ.
ಈ ಹಿಂದೆ ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ ಹಿಂಸಾಚಾರದ ವೇಳೆ ಖಾಸ್ ಖಜೂರಿ ಗಾಲಿ ಪ್ರದೇಶದಲ್ಲಿನ ಗಡಿ ಭದ್ರತಾ ಪಡೆ ಯೋಧ ಮೊಹಮ್ಮದ್ ಅನೀಸ್ ಮನೆಗೆ ಗಲಭೆಕೋರರು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. ಈ ವಿಚಾರವೀಗ ತಡವಾಗಿ ಬೆಳಕಿಗೆ ಬಂದಿತ್ತು. ವಿಚಾರ ತಿಳಿದ ಕೂಡಲೇ ನೆರವಿಗೆ ಧಾವಿಸಿದ್ದ ಬಿಎಸ್ಎಫ್ ಯೋಧ ಮೊಹಮ್ಮದ್ ಅನೀಸ್ಗೆ ಮನೆ ಕಟ್ಟಿಸಿ ಕೊಡುವುದಾಗಿ ಭರವಸೆ ನೀಡಿತ್ತು.
ಈ ಕುರಿತಂತೆ ಮಾತನಾಡಿದ್ದ ಬಿಎಸ್ಎಫ್ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್(ಡಿಐಜಿ) ಪುಷ್ಪೇಂದ್ರ ರಾಥೋಡ್ ಅವರು, ಯೋಧ ಮೊಹಮ್ಮದ್ ಅನೀಸ್ ಮದುವೆಗೆ ಹೊಸ ಮನೆ ಕಟ್ಟಿಸಿ ಉಡುಗೊರೆಯಾಗಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಅದರಂತೆ ಇದೀಗ ಯೋಧ ಅನೀಸ್ ಗೆ ಬಿಎಸ್ಎಫ್ 10 ಲಕ್ಷ ರೂಗಳ ಚೆಕ್ ವಿತರಣೆ ಮಾಡಿದೆ.
ಯೋಧ ಎಂಬುದನ್ನೂ ನೋಡದೇ ಪಾಕಿಸ್ತಾನಿ ಎಂದು ಚೀರಿದ್ದ ಪ್ರತಿಭಟನಾಕಾರರು ಇನ್ನು ಇತ್ತೀಚೆಗೆ ಸಂಭವಿಸಿದ್ದ ಹಿಂಸಾಚಾರದ ವೇಳೆ ಮನೆಯ ಹೊರಗಡೆ ಮೊಹಮ್ಮದ್ ಅನೀಸ್, ಬಿಎಸ್‌ಎಫ್ ಯೋಧ’ ಎಂದು ಬರೆದಿದ್ದ ನೇಮ್ ಪ್ಲೇಟ್ ಹಾಕಲಾಗಿತ್ತು. ಇದಾವುದನ್ನೂ ಲೆಕ್ಕಿಸದ ಗಲಭೆಕೋರ “ಯೋಧನನ್ನೇ ಹೊರಗೆ ಬಾರೋ ಪಾಕಿಸ್ತಾನಿ, ನಿನಗೆ ಪೌರತ್ವ ಕೊಡುತ್ತೇವೆ’ ಎಂದು ಚೀರಿದ್ದ. ನಂತರ ಗ್ಯಾಸ್ ಸಿಲಿಂಡರ್ ಎಸೆದು ಮನೆಗೆ ಬೆಂಕಿ ಹಚಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆಯಲ್ಲಿ ಯೋಧ ಅನೀಸ್ ಮನೆ ಸುಟ್ಟು ಹೋಗಿದ್ದಲ್ಲದೇ ಮೊಹಮ್ಮದ್ ಅನೀಸ್ ಮದುವೆಗಾಗಿ ಮನೆಯಲ್ಲಿ ಕೂಡಿಟ್ಟಿದ್ದ 3 ಲಕ್ಷ ರೂ. ನಗದು ಸುಟ್ಟು ಕರಕಲಾಗಿದೆ. ಹಾಗೆಯೇ ಚಿನ್ನಾಭರಣಗಳು ಕೂಡ ಭಸ್ಮಗೊಂಡಿವೆ ಎಂದು ಯೋಧರ ಕುಟುಂಬ ತಮ್ಮ ಅಳಲು ತೋಡಿಕೊಂಡಿದೆ.
ಗಲಭೆಕೋರರು ಮನೆಗೆ ಬೆಂಕಿ ಹಚ್ಚಿದ ವೇಳೆ ಅನೀಸ್ ಜತೆ ಕುಟುಂಬಸ್ಥರಿಗೆ ತೀವ್ರ ಗಾಯಗಳಾಗಿವೆ. ತಂದೆ ಮೊಹಮ್ಮದ್ ಮುನೀಸ್, ಚಿಕ್ಕಪ್ಪ ಮೊಹಮ್ಮದ್ ಅಹ್ಮದ್, ತಂಗಿ ನೇಹಾ ಗಾಯಾಗೊಂಡಿದ್ದಾರೆ.
Comments are closed.