ಕರ್ನಾಟಕ

ಚುಂಬಿಸಿ, ಕುಣಿಯುತ್ತಾರೆ -ದಾವಣಗೆರೆಯಲ್ಲೊಂದು ವಿಶೇಷ ಜಾತ್ರೆ

Pinterest LinkedIn Tumblr


ದಾವಣಗೆರೆ: ಜಾತ್ರೆ ಎಂದರೆ ಸಾಕು ಪೂಜೆ, ದೇವಿ ಮೆರವಣೆಗೆ, ಭರ್ಜರಿ ಬಾಡೂಟ ಎಲ್ಲಾ ಇರುತ್ತೆ. ನೆಂಟರೆಲ್ಲಾ ಬಂದು ಮನೆಯಲ್ಲಿ ಸಂಭ್ರಮದ ವಾತವರಣದ ಇರುತ್ತದೆ. ಅಲ್ಲದೆ ಜಾತ್ರೆಯಲ್ಲಿ ಆರ್ಕೇಸ್ಟ್ರಾ, ರಿಕಾರ್ಡಿಂಗ್ ಡ್ಯಾನ್ಸ್, ನಾಟಕ ಸೇರಿದಂತೆ ಹಲವು ರೀತಿಯ ಮನೋರಂಜನೆ ಕೂಡ ಇರುತ್ತದೆ. ಆದರೆ ದಾವಣಗೆರೆ ತಾಲೂಕಿನ ಮಾಗಾನಹಳ್ಳಿ ಗ್ರಾಮದಲ್ಲಿ ನಡೆಯುವ ಜಾತ್ರೆಯಲ್ಲಿ ದೇವಿಯ ಮುಂದೆ ಭಕ್ತರು ಜೋಡಿಗಳು ಡ್ಯಾನ್ಸ್ ಮಾಡಿ, ಮುತ್ತು ಕೊಟ್ಟು ವಿಶಿಷ್ಟವಾಗಿ ಜಾತ್ರೆ ಆಚರಿಸುತ್ತಾರೆ.

ಹೌದು. ಮಾಗಾನಹಳ್ಳಿಯ ಉರಮ್ಮ ದೇವಿಯ ಎದುರು ಭಕ್ತರು ಜೋಡಿಯಾಗಿ ಡ್ಯಾನ್ಸ್ ಮಾಡಿ, ಮುತ್ತು ಕೊಡುವುದೇ ಈ ಜಾತ್ರೆಯ ವಿಶೇಷವಾಗಿದೆ. ಈ ಊರಲ್ಲಿ 10 ವರ್ಷಕ್ಕೊಮ್ಮೆ ಈ ಜಾತ್ರೆ ನಡೆಯುತ್ತದೆ. ಮೂರು ದಿನಗಳ ಕಾಲ ನಡೆಯುವ ದೇವಿಯ ಜಾತ್ರೆಯನ್ನು ಗ್ರಾಮಸ್ಥರು ಅದ್ಧೂರಿಯಾಗಿ ಆಚರಿಸಿ ದೇವರ ಕೃಪಗೆ ಪಾತ್ರರಾಗುತ್ತಾರೆ.

ಈ ಜಾತ್ರೆಯಲ್ಲಿ ಅಸಾಧಿ ಸಂಪ್ರದಾಯದ ನೃತ್ಯ ಮಾಡಲಾಗುತ್ತೆ. ಸಾಮಾನ್ಯವಾಗಿ ದಲಿತರು ಅಸಾಧಿ ಪದ ಹಾಡಿ ನೃತ್ಯ ಮಾಡುತ್ತಾರೆ. ಹೀಗಾಗಿ ಇಲ್ಲಿ ಕೂಡ ಸಂಪ್ರದಾಯದಂತೆ ದಲಿತ ಮಹಿಳೆಯೊಬ್ಬಳು ಗ್ರಾಮದ ಜಾತ್ರೆ ವೇಳೆ ನೃತ್ಯ ಮಾಡುತ್ತಾಳೆ. ಈ ಮಹಿಳೆ ಜೊತೆ ಗ್ರಾಮದ ಮುಖಂಡ ಕೂಡ ಹೆಜ್ಜೆ ಹಾಕುತ್ತಾನೆ. ನೃತ್ಯ ಮಾಡುವ ವೇಳೆ ಆ ಮಹಿಳೆಗೆ ಮುತ್ತು ಕೊಡುವುದೇ ಈ ಜಾತ್ರೆಯ ವಿಶೇಷವಾಗಿದೆ.

ದೊಡ್ಡವರು ಮಾತ್ರವಲ್ಲ ಮಕ್ಕಳು, ವೃದ್ಧರು ಕೂಡ ಡ್ಯಾನ್ಸ್ ಮಾಡಿ ಜಾತ್ರೆಯಲ್ಲಿ ಸಂಭ್ರಮಿಸುತ್ತಾರೆ. ಈ ರೀತಿ ನೃತ್ಯ ಮಾಡಿದರೆ ಗ್ರಾಮ ದೇವಿ ಸಂತೃಪ್ತಳಾಗುತ್ತಾರೆ. ತಮ್ಮ ಸಂಕಷ್ಟ ನಿವಾರಣೆಯಾಗುತ್ತದೆ ಎಂಬುದು ಗ್ರಾಮದ ಜನರ ನಂಬಿಕೆಯಾಗಿದೆ. ಇಂಥ ವಿಶಿಷ್ಟ ಆಚರಣೆ ನಡೆಸುವ ಮೂಲಕ ಇಡೀ ಗ್ರಾಮವೇ ಜಾತ್ರೆ ಮಾಡುತ್ತದೆ.

ತುಂಬಾ ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ, ನಮ್ಮ ಹಿರಿಯರ ಮಾರ್ಗದರ್ಶನದಂತೆ ನಾವು ಹಬ್ಬ ಮಾಡುತ್ತೇವೆ. ಜಾತ್ರೆಯಲ್ಲಿ ದೇವರಿಗೆ ವಿಶೇಷ ಪೂಜೆ ವಿಶಿಷ್ಟ ಅಡುಗೆ ಮಾಡುತ್ತೇವೆ. ಜೊತೆಗೆ ಅಸಾಧಿ ಸಂಪ್ರದಾಯದಂತೆ ನೃತ್ಯ ಮಾಡುವುದು ಒಂದು ಸಂಪ್ರದಾಯ. ಹತ್ತು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಅಸಾಧಿ ಆಚರಣೆ ಪ್ರಮುಖವಾಗಿದ್ದು, ಇಲ್ಲಿ ಯಾವುದೇ ಅಶ್ಲೀಲತೆ ಇರುವುದಿಲ್ಲ. ಹೀಗೆ ಮಾಡಿದರೆ ಊರಮ್ಮ ದೇವಿ ಸಂತೃಷ್ಟವಾಗಿ ಇಡೀ ಗ್ರಾಮಕ್ಕೆ ಒಳಿತು ಮಾಡುತ್ತಾಳೆ ಎನ್ನುವುದು ಇಲ್ಲಿನ ನಂಬಿಕೆ ಎಂದು ಗ್ರಾಮದ ಮುಖಂಡರು ಹೇಳಿದ್ದಾರೆ.

ವಿಶಿಷ್ಟ ಹಬ್ಬ ಆಚರಣೆ ಹಿನ್ನೆಲೆ ಸುತ್ತಮುತ್ತ ಗ್ರಾಮದ ಜನರು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಇನ್ನೂ ಅಸಾಧಿ ಸಂಪ್ರಾದಾಯದಂತೆ ಇಲ್ಲಿ ನೃತ್ಯ ಮಾಡಿ ಕಿಸ್ ಮಾಡುವುದು ಸಖತ್ ಫೇಮಸ್ ಆಗಿದೆ. ಇದು ಒಂದು ಸಂಪ್ರದಾಯವಷ್ಟೇ ಎಂಬುದು ಜನರ ನಂಬಿಕೆಯಾಗಿದೆ.

Comments are closed.