ಕರ್ನಾಟಕ

ರವಿ ಪೂಜಾರಿ ಬಂಧನಕ್ಕೆ ಮುಳುವಾಗಿದ್ದು ಏನು ಗೊತ್ತಾ?

Pinterest LinkedIn Tumblr


ಬೆಂಗಳೂರು: ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ದಿನಕ್ಕೆ ಹತ್ತಾರು ಮಂದಿಗೆ ದುಡ್ಡು ಕೊಡಿ ಎಂದು ಬೆದರಿಕೆ ಕರೆ ಮಾಡುತ್ತಿದ್ದ ರವಿ ಪೂಜಾರಿ ಸಂಸದ ಡಿ.ಕೆ. ಸುರೇಶ್‌ಗೆ ಮಾಡಿದ್ದ ಬೆದರಿಕೆ ಕರೆಯೇ ಕೊನೆಗೆ ಮುಳುವಾಯಿತು ಎನ್ನುತ್ತವೆ ಪೊಲೀಸ್‌ ಮೂಲಗಳು.

ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುವ ಎಲ್ಲ ಪ್ರಕರಣಗಳನ್ನೂ ತನ್ನ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದ ಪೂಜಾರಿ, ಸಂಸದ ಡಿ.ಕೆ. ಸುರೇಶ್‌, ಉದ್ಯಮಿ ಅನಿಲ್‌ ಲಾಡ್‌ಗೆ ಬೆದರಿಕೆ ಹಾಕಿ ದುಡ್ಡು ಕೊಡಿ ಎಂದು ಕೇಳಿದ್ದ.

ಇದಕ್ಕೂ ಮೊದಲು ಹತ್ತಾರು ರಾಜಕಾರಣಿಗಳಿಗೆ ಬೆದರಿಕೆ ಹಾಕಿದ್ದರೂ ಈ ಬೆದರಿಕೆ ಕರೆಗಳನ್ನು ಗಂಭೀರವಾಗಿ ಪರಿಗಣಿಸದಿದ್ದ ಎಚ್‌ಡಿ ಕುಮಾರಸ್ವಾಮಿ ಸರಕಾರ ಈ ಪ್ರಕರಣದಲ್ಲಿ ರವಿ ಪೂಜಾರಿಯನ್ನು ಬಂಧಿಸಿ ಕರೆತರಲೇ ಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಸೂಚಿಸಿತ್ತು ಎನ್ನಲಾಗಿದೆ.

ಮಕ್ಕಳು ಕೆನಡಾದಲ್ಲಿ
ರವಿ ಪೂಜಾರಿಯ ಪತ್ನಿ ಮತ್ತು ಪುತ್ರ ಸೆನೆಗಲ್‌ನಲ್ಲೇ ಇದ್ದಾರೆ. ಇನ್ನು ಇಬ್ಬರು ಪುತ್ರಿಯರಿಗೆ ಮದುವೆಯಾಗಿದ್ದು, ಅವರು ಕೆನಡಾದಲ್ಲಿ ನೆಲೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕರ್ನಾಟಕ ಅಂದಾಗ ನಿರಾಳವಾದ
ರವಿ ಪೂಜಾರಿಯನ್ನು ಬಂಧಿಸಲು ಪೊಲೀಸರು ಸೆನೆಗಲ್‌ ತಸುಪಿದಾಗ ರವಿ ಪೂಜಾರಿ ಭಯಗೊಂಡಿದ್ದ. ಮುಂಬೈ ಪೊಲೀಸರು ಅಥವಾ ದಿಲ್ಲಿಯಿಂದ ಸಿಬಿಐ ಅಧಿಕಾರಿಗಳು ಬಂದಿರಬಹುದು ಎನ್ನುವ ಭಯ ಇತ್ತು. ಮುಂಬೈ ಪೊಲೀಸರು ಮೋಕಾ ಅಡಿಯಲ್ಲಿ ಬಂಧಿಸಬಹುದು ಅಥವಾ ಮುಂಬೈನ ಇತರೆ ಗ್ಯಾಂಗ್‌ಗಳಿಂದ ತನಗೆ ಜೀವ ಭಯ ಇರುವ ಕಾರಣಕ್ಕೆ ಮುಂಬೈಗೆ ಹೋಗುವುದಕ್ಕೆ ಹೆದರಿದ್ದ. ಆದರೆ, ಕರ್ನಾಟಕ ಪೊಲೀಸರು ತನ್ನನ್ನು ಬಂಧಿಸಿ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎನ್ನುವುದು ಗೊತ್ತಾಗಿ ನಿರಾಳನಾದ. ಭಾರತದಿಂದ ಪರಾರಿಯಾದ ಬಳಿಕ ಆತ ಮಲೇಷ್ಯಾ, ಇಂಡೋನೇಷ್ಯಾಗೆ ಆಗಾಗ್ಗೆ ಬಂದು ಹೋಗುತ್ತಿದ್ದ. ಒಂದು ಬಾರಿ ಅಮೆರಿಕಕ್ಕೂ ಹೋಗಿ ಬಂದಿದ್ದ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದರು.

Comments are closed.