ಕರ್ನಾಟಕ

ಸೂಸೈಡ್ ಮಾಡಿಕೊಂಡ ವೈದ್ಯ ಗಂಡನೇ ಪತ್ನಿಯ ಕೊಲೆಗಾರ!

Pinterest LinkedIn Tumblr


ಚಿಕ್ಕಮಗಳೂರು: ಕಡೂರಿನ ಲಕ್ಷ್ಮೇಶ ನಗರದಲ್ಲಿ ಫೆ. 17ರಂದು ನಡೆದ ಮಹಿಳೆಯ ಹತ್ಯೆ ಅತ್ಯಂತ ಭಯಾನಕ ತಿರುವು ಪಡೆದುಕೊಂಡಿದೆ. ಅಂದು ದರೋಡೆಕೋರರು 7 ತಿಂಗಳ ಪುಟ್ಟ ಮಗುವಿನ ಮುಂದೆಯೇ ಕವಿತಾ ಅವರನ್ನು ಕೊಲೆ ಮಾಡಿದ್ದರೆಂಬ ಸಂಶಯ ಮೂಡಿತ್ತು. ಆದರೆ, ಕೊಲೆ ಮಾಡಿದ್ದು ದರೋಡೆಕೋರರಲ್ಲ, ಬದಲಾಗಿ ಸ್ವತಃ ಕವಿತಾ ಅವರ ಪತಿ ದಂತವೈದ್ಯ ಡಾ. ರೇವಂತ್‌ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ, ಅಷ್ಟು ಹೊತ್ತಿಗೆ ಆರೋಪಿ ರೇವಂತ್‌ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೇವಂತ್‌ ತಮ್ಮ ಪತ್ನಿಗೆ ನಿದ್ದೆ ಬರುವ ಇಂಜೆಕ್ಷನ್‌ ಕೊಟ್ಟು, ಕತ್ತು ಸೀಳಿ ಹತ್ಯೆ ಮಾಡಿದ್ದಾಗಿ ಪೊಲೀಸ್‌ ಇಲಾಖೆಯ ವಿಶ್ವಾಸನೀಯ ಮೂಲಗಳು ಖಚಿತಪಡಿಸಿವೆ. ಹೊಟ್ಟೆಯ ಭಾಗಕ್ಕೆ ಎರಡು ಇಂಜೆಕ್ಷನ್‌ಗಳನ್ನು ಚುಚ್ಚಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಕೊಲೆ ಪ್ರಕರಣ ಪಡೆದುಕೊಂಡಿರುವ ತಿರುವಿನಿಂದ ಕಡೂರು ಬೆಚ್ಚಿ ಬಿದ್ದಿದೆ.

ಮೊದಲ ದಿನವೇ ಅನುಮಾನವಿತ್ತು
ಸ್ಥಳ ಪರಿಶೀಲನೆ, ಸಿಸಿ ಟಿವಿ ದೃಶ್ಯಾವಳಿ ಗಮನಿಸಿದ ಪೊಲೀಸರಿಗೆ ರೇವಂತ್‌ ಮೇಲೆಯೇ ಅನುಮಾನ ಬಂದಿತ್ತು. ಆದರೆ ತಕ್ಷಣ ಬಂಧಿಸದೆ ಮಾಹಿತಿ ಕಲೆ ಹಾಕುತ್ತಿದ್ದರು. ಈ ನಡುವೆ, ಪೊಲೀಸರು ತನ್ನನ್ನು ಬಂಧಿಸುವುದು ಖಚಿತವಾಗುತ್ತಿದ್ದಂತೆಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಭಾನುವಾರ ಕೆಲವು ಸ್ನೇಹಿತರಿಗೆ ಕರೆ ಮಾಡಿದ ರೇವಂತ್‌ ಇನ್ನು ಅರ್ಧ ಗಂಟೆ ನಂತರ ನಾನು ಇರುವುದಿಲ್ಲ. ಮಾತನಾಡುವುದಿದ್ದರೆ ಈಗಲೇ ಮಾತನಾಡಿಕೊಳ್ಳಿ ಎಂದು ಹೇಳಿದ್ದರೆನ್ನಲಾಗಿದೆ. ನಂತರ ಕಡೂರು ಸಮೀಪದ ಬಂಡಿಕೊಪ್ಪಲು ಗೇಟ್‌ ಬಳಿ ರೈಲಿಗೆ ತಲೆ ಕೊಟ್ಟು ಪ್ರಾಣ ಕಳೆದುಕೊಂಡಿದ್ದಾರೆ.

ಆವತ್ತು ಆಗಿದ್ದೇನು?
ಫೆ.17ರಂದು ಮನೆಯಲ್ಲಿ ಡಾ. ರೇವಂತ್‌ ದಂಪತಿ ಮತ್ತು ಇಬ್ಬರು ಪುಟ್ಟ ಮಕ್ಕಳು ಮಾತ್ರ ಇದ್ದರು. ಈ ವೇಳೆ ರೇವಂತ್‌ ಪತ್ನಿಯ ಹೊಟ್ಟೆಗೆ ಇಂಜೆಕ್ಷನ್‌ ಚುಚ್ಚಿ, ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ದರೋಡೆ ಸಂಶಯ ಬರುವಂತೆ ಚಿನ್ನಾಭರಣವನ್ನು ಜಾಲಾಡಿದಂತೆ ಮಾಡಿದ್ದರು ಎನ್ನಲಾಗಿದೆ. ಕೊಲೆ ಮಾಡಿದ ಬಳಿಕ ಐದು ವರ್ಷದ ಮಗನನ್ನು ಕರೆದುಕೊಂಡು ಬೀರೂರಿನಲ್ಲಿರುವ ತಮ್ಮ ಸ್ಮೈಲ್‌ ಡೆಂಟಲ್‌ ಕ್ಲಿನಿಕ್‌ಗೆ ತೆರಳಿದ್ದರು. ಏಳು ತಿಂಗಳ ಗಂಡು ಮಗು ಕೋಣೆಯೊಳಗೇ ಇತ್ತು. ರೇವಂತ್‌ ಅವರ ತಾಯಿ ಮನೆಗೆ ಬಂದಾಗ ಕೊಲೆ ಘಟನೆ ಬೆಳಕಿಗೆ ಬಂದಿತ್ತು.

ಅಕ್ರಮ ಸಂಬಂಧ ಕಾರಣ?
ಹಿಂದೆ ಕಡೂರಿನಲ್ಲೇ ಇದ್ದ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಮಹಿಳೆಯೊಂದಿಗೆ ಡಾ.ರೇವಂತ್‌ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಫೆ.14ರಂದು ದಂಪತಿ ಹೋಟೆಲ್‌ಗೆ ಹೋಗಿದ್ದ ವೇಳೆ ಆ ಮಹಿಳೆಯ ಫೋನ್‌ ಬಂದಿದ್ದರಿಂದ ಜಗಳವಾಗಿತ್ತು. ಇದೇ ಕಾರಣಕ್ಕೆ ಕವಿತಾ ಈ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದರು.

Comments are closed.