ಕೃಷ್ಣಗಿರಿ( ತಮಿಳುನಾಡು): ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಅಟ್ಟಹಾಸ ಮೆರೆದಿದ್ದ ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾರಾಣಿ ಶನಿವಾರ ಬಿಜೆಪಿಗೆ ಸೇರ್ಪಡೆಗೊಂಡಿರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿದ್ಯಾರಾಣಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈ ವೇಳೆ ಕಮಲ ತೊಡಲು ಪ್ರಧಾನಿ ನರೇಂದ್ರ ಮೋದಿಯೇ ಸ್ಫೂರ್ತಿ ಎಂದಿದ್ದರು.
ವೀರಪ್ಪನ್ ಪುತ್ರಿ ವಿದ್ಯಾರಾಣಿ ಬಿಜೆಪಿ ಸೇರ್ಪಡೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. ಪರ ಹಾಗೂ ವಿರುದ್ಧವಾದ ಅಭಿಪ್ರಾಯವನ್ನು ಹಲವರು ಮುಂದಿಟ್ಟಿದ್ದಾರೆ.
“ವೀರಪ್ಪನ್ ಪುತ್ರಿ ರಾಷ್ಟ್ರ ನಾಯಕರ ಸಮ್ಮುಖ ಬಿಜೆಪಿ ಸೇರ್ಪಡೆಗೊಂಡಿದ್ದಾಳೆ. ಸೇರಲಿ,ತಂದೆಯ ಅಪರಾಧಗಳಿಗೆ ಮಗಳು ಜವಾಬ್ದಾರಳಲ್ಲ. ಆದರೆ, ಆಕೆಯನ್ನು ಬೇರೆ ಪಕ್ಷಗಳು ಹಾರ ಹಾಕಿ ಸೇರ್ಪಡೆ ಮಾಡಿಕೊಂಡಿದ್ದರೆ ಬಿಜೆಪಿ ಪ್ರತಿಕ್ರಿಯೆ ಹೇಗಿರುತ್ತಿತ್ತು” ಎಂದು ಸಾಮಾಜಿಕ ಹೋರಾಟಗಾರರಾದ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.
“ತಂದೆಯ ತಪ್ಪಿಗೆ ಮಗಳೇಕೆ ಬೆಲೆ ತೆರಬೇಕು? ವೀರಪ್ಪನ್ ಮಗಳನ್ನು ಅವಳಷ್ಟಕ್ಕೆ ಬಿಟ್ಟುಬಿಡಿ. ಆಳುವ ಪಕ್ಷ ಹಾಗೂ ಒಕ್ಕೂಟ ಸರ್ಕಾರದ ವಿರುದ್ಧದ ಟೀಕೆಗೆ ಇನ್ನೂ ಬೇಕಾದಷ್ಟು ಸರಕಿದೆ” ಎಂದು ಬರಹಗಾರರಾದ ಕುಂತ್ಯಾಡಿ ನಿತೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವೀರಪ್ಪನ್ ಪುತ್ರಿ ತನ್ನ ತಂದೆ ಮಾಡಿದ ಕೃತ್ಯವನ್ನು ಯಾವತ್ತೂ ಸಮರ್ಥನೆ ಮಾಡಿಲ್ಲ. ಹೀಗಿದ್ದಾಗ ಅವರು ರಾಜಕೀಯಕ್ಕೆ ಸೇರುವುದರಲ್ಲಿ ತಪ್ಪೇನಿದೆ ಎಂದು ಟ್ವಿಟ್ಟರ್‌ನಲ್ಲಿ ದೀಪಕ್ ಎಂಬುವವರು ಪ್ರಶ್ನಿಸಿದ್ದಾರೆ.
ರಾಜೇಶ್ ರಾಮಯ್ಯ ಎಂಬ ಟ್ವಿಟ್ಟರ್ ಬಳಕೆದಾರರೊಬ್ಬರು ವೀರಪ್ಪನ್‌ಗೆ ಬಿಜೆಪಿ ಟೋಪಿ ಧರಿಸಿದ ಫೋಟೋವನ್ನು ಹಾಕಿ ಇದು ‘ಸಹಜವಾದ ಆಯ್ಕೆ’ ಎಂದು ಕಿಚಾಯಿಸಿದ್ದಾರೆ.
ಕರ್ನಾಟಕ ಹಾಗೂ ತಮಿಳುನಾಡಿನ ಕಾಡುಗಳಲ್ಲಿ ಆನೆಯನ್ನು ಬೇಟೆ, ಅಪಹರಣ, ಹತ್ಯೆ, ಬಾಂಬ್ ಸ್ಫೋಟಗಳಿಂದ ಅಟ್ಟಹಾಸ ಮೆರೆದಿದ್ದ ಕಾಡುಗಳ್ಳ ವೀರಪ್ಪನ್‌ನನ್ನು ಕರ್ನಾಟಕ, ತಮಿಳುನಾಡು ಜಂಟಿ ಪೊಲೀಸರು ತಂಡ ಗುಂಡಿಕ್ಕಿ ಹತ್ಯೆ ಮಾಡಿತ್ತು. ವೀರಪ್ಪನ್ ಕುರಿತಾಗಿ ಕನ್ನಡದಲ್ಲೂ ಸಿನಿಮಾಗಳು ತೆರೆಕಂಡಿವೆ.
Comments are closed.