ಕರ್ನಾಟಕ

ಹಿಂದೂ ಪರ ಸಂಘಟನೆಗಳ ಪ್ರತಿಭಟನೆಯಲ್ಲಿ ಯುವತಿಯಿಂದ ಪಾಕಿಸ್ತಾನ್​ ಜಿಂದಾಬಾದ್​ ಘೋಷಣೆ?

Pinterest LinkedIn Tumblr


ಬೆಂಗಳೂರು (ಫೆ.21): ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಟಿಪ್ಪು ಸುಲ್ತಾನ್‌ ಯುನೈಟೆಡ್‌ ಫ್ರಂಟ್‌ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಆಯೋಜಿಸಿದ್ದ ಪ್ರತಿಭಟನೆ ವೇಳೆ ‘ಪಾಕಿಸ್ತಾನ ಜಿಂದಾಬಾದ್’ ಎಂದು ಅಮೂಲ್ಯ ಲಿಯೋನಾ ಘೋಷಣೆ ಕೂಗಿದ್ದಳು. ಈ ವಿಚಾರ ಚರ್ಚೆಯಲ್ಲಿರುವಾಗಲೇ, ಟೌನ್​ ಹಾಲ್​ ಎದುರು ಯುವತಿಯೊಬ್ಬಳು ಇದೇ ರೀತಿ ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ.

ಅಮೂಲ್ಯ ವಿರುದ್ಧ ಟೌನ್​ ಹಾಲ್​ನಲ್ಲಿ ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ಅರುದ್ರಾ ಹೆಸರಿನ ಯುವತಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ. ಕೂಡಲೇ ಆಕೆಯನ್ನು ಎಸ್​ಜೆ ಪಾರ್ಕ್ ಪೊಲೀಸರು ವಶಕ್ಕೆ ಪಡೆದು, ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ಯುವತಿ ಯಾರು? ಈ ಪ್ರತಿಭಟನೆಗೆ ಏಕೆ ಬಂದಳು ಎನ್ನುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಈ ಬಗ್ಗೆ ಮಾತನಾಡಿರುವ ಡಿಸಿಪಿ ಚೇತನ್ ಸಿಂಗ್, “ಟೌನ್ ಹಾಲ್​​ನಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಯುವತಿ ಫ್ರೀ ಕಾಶ್ಮೀರ ಪ್ಲೇ ಕಾರ್ಡ್ ಹಿಡಿದಿದ್ದಳು ಎನ್ನಲಾಗಿದೆ. ಆದರೆ, ಘೋಷಣೆ ಕೂಗಿರುವ ಬಗ್ಗೆ ನಮಗೆ ಗೊತ್ತಿಲ್ಲ. ದೃಶ್ಯಾವಳಿ ನೋಡಿ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ,” ಎಂದಿದ್ದಾರೆ.

ಗೊಂದಲ ಸೃಷ್ಟಿಸಿದ ಹೇಳಿಕೆ:

ಯುವತಿ ಪಾಕಿಸ್ತಾನ್ ಜಿಂದಾಬಾದ್ ಹೇಳಿಕೆ ನೀಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಆಕೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಕಿದ್ದಾಗಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಹೇಳುತ್ತಿದ್ದಾರೆ. ಸದ್ಯ ಈ ಹೇಳಿಕೆ ಗೊಂದಲ ಸೃಷ್ಟಿಸಿದ್ದು, ಸೂಕ್ತ ತನಿಖೆ ನಡೆಸುವಂತೆ ಇನ್ಸ್​ಪೇಕ್ಟರ್​ ತನ್ವೀರ್ ಅವರಿಗೆ ಡಿಸಿಪಿ ಸೂಚಿಸಿದ್ದಾರೆ.

ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದ ಸಿದ್ದರಾಮಯ್ಯ:ಪಾಕ್​ ಪರ ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, “ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಖಂಡನೀಯ ನಡವಳಿಕೆ.ಪೊಲೀಸರು ಸರಿಯಾದ ತನಿಖೆ ನಡೆಸಿ ಆಕೆಗೆ ತನ್ನ ತಪ್ಪಿನ ಅರಿವಾಗುಂತಹ ಶಿಕ್ಷೆ ನೀಡಬೇಕು,” ಎಂದು ಆಗ್ರಹಿಸಿದ್ದಾರೆ.

ಏನಿದು ಅಮೂಲ್ಯ ಪ್ರಕರಣ?:

ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಗುರುವಾರ ಪ್ರತಿಭಟನೆ ಆಯೋಜಿಸಲಾಗಿತ್ತು. ಈ ಪ್ರತಿಭಟನಾ ಸಭೆಯಲ್ಲಿ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪಾಲ್ಗೊಂಡಿದ್ದರು. ಪ್ರತಿಭಟನೆ ಆರಂಭವಾಗುತ್ತಿದ್ದಂತೆ ವೇದಿಕೆ ಮೇಲೆ ಬಂದ ಅಮೂಲ್ಯ ಎಂಬ ಯುವತಿ ಇದ್ದಕ್ಕಿದ್ದ ಹಾಗೆ ‘ಪಾಕಿಸ್ತಾನ ಜಿಂದಾಬಾದ್’ ಎಂದು ಎರಡು ಬಾರಿ ಘೋಷಣೆ ಕೂಗಿದ್ದಳು. ತಕ್ಷಣ ಆಕೆಯನ್ನು ವೇದಿಕೆಯಿಂದ ಕೆಳಗಿಳಿಸಿದ ಆಯೋಜಕರು ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಆಕೆಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Comments are closed.