ಕರ್ನಾಟಕ

ವಿವಾಹಿತ ಮಹಿಳೆಯ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರಕ್ಕೆ ಯತ್ನ

Pinterest LinkedIn Tumblr


ಬೆಂಗಳೂರು ಗ್ರಾಮಾಂತರ: ಮಾಕೇನಹಳ್ಳಿ ಗ್ರಾಮದ ಬಳಿ ಗಾರ್ಮೆಂಟ್‌ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಮಹಿಳೆಯನ್ನು ಅಡ್ಡ ಗಟ್ಟಿ ಅತ್ಯಾಚಾರಕ್ಕೆ ಪ್ರಯತ್ನಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಮಾಕೇನಹಳ್ಳಿ ಗ್ರಾಮದ ರಂಗನಾಥ (55) ಎಂಬವರು ಜಿನ್ನಯ್ಯನಪಾಳ್ಯದ ವಿವಾಹಿತ ಮಹಿಳೆಯನ್ನು ಅಡ್ಡಗಟ್ಟಿ ಆಕೆಯನ್ನು ತಬ್ಬಿಕೊಂಡು ಮೈಮೇಲಿನ ಬಟ್ಟೆ ಹರಿದು ಹಾಕಿ ಬಾಯಿಗೆ ಬಟ್ಟೆ ತುರುಕಿ ಮಾನ ಭಂಗಕ್ಕೆ ಮುಂದಾಗಿದ್ದಾರೆ.

ಆಗ ಆತನ ಮುಖವನ್ನು ಮೊಬೈಲ್‌ನಿಂದ ಸೆರೆ ಹಿಡಿಯುವಾಗ ಆತ ಫೋನ್‌ ಅನ್ನು ಕಿತ್ತು ಬಿಸಾಕಿ ಮಚ್ಚು ತೋರಿಸಿ ಕೂಗಿಕೊಂಡರೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ. ಈ ವೇಳೆ ಮಹಿಳೆ ಕಿರುಚಿ ಕೊಂಡಿದ್ದು, ಈ ವೇಳೆ ರಂಗನಾಥ್‌ ಮಹಿಳೆಯ ಕತ್ತು ಹಿಸುಕಿದ್ದಾನೆ. ಈ ವೇಳೆ ಮಹಿಳೆ ಜೋರಾಗಿ ಕಿರುಚಿಕೊಂಡಾಗ ಊರಿನಲ್ಲಿ ಮೇಕೆ ಕಾಯುವ ನಾಗಮ್ಮ ಬಂದು ಕಾಮುಕ ರಂಗನಾಥನಿಗೆ ಬೈದಿದ್ದಾಳೆ.

ಇವರ ಗಲಾಟೆ ಕೇಳಿಸಿ ಕೊಂಡ ಗ್ರಾಮಸ್ಥರು ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಜನರು ಬರುತ್ತಿರುವುದನ್ನು ನೋಡಿದ ಕಾಮುಕ ರಂಗನಾಥ್‌ ಸ್ಥಳದಿಂದ ಪರಾರಿಯಾಗುವ ವೇಳೆ ಜನ ಆತನನ್ನು ಹಿಡಿದು ತದುಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಸಂತ್ರಸ್ಥೆ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಸಬ್‌ ಇನ್ಸ್‌ಪೆಕ್ಟರ್‌ ವಸಂತ ತಿಳಿಸಿದರು.

Comments are closed.