
ಮೈಸೂರು(ಫೆ. 19): ಹೆಂಡತಿಯ ಅತಿಯಾದ ಮಡಿವಂತಿಕೆಯಿಂದ ಬೇಸತ್ತ ಗಂಡ ಆಕೆಯನ್ನು ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನ ಮಡಹಳ್ಳಿಯಲ್ಲಿ ನಡೆದಿದೆ.
ಶಾಂತಮೂರ್ತಿ( 40 ) ಕೊಲೆ ಮಾಡಿ ನೇಣಿಗೆ ಶರಣಾದ ವ್ಯಕ್ತಿ. ಪುಟ್ಟಮಣಿ (38) ಗಂಡನಿಂದ ಕೊಲೆಯಾದ ಮಹಿಳೆ. 15 ವರ್ಷಗಳ ಹಿಂದೆ ಟಿ.ನರಸೀಪುರದ ಕಿರಗೂರಿನ ಪುಟ್ಟಮಣಿಯನ್ನು ಶಾಂತಮೂರ್ತಿ ಮದುವೆಯಾಗಿದ್ದ. ದಂಪತಿಗೆ ಪಲ್ಲವಿ (7) ಮತ್ತು ಅಭಿ (12) ಎಂಬ ಇಬ್ಬರು ಮಕ್ಕಳಿದ್ದಾರೆ.
ಹೆಂಡತಿಯ ಅತಿಯಾದ ಮಡಿವಂತಿಕೆ:
ಕೊಲೆಯಾದ ಮಹಿಳೆ ಪುಟ್ಟಮಣಿ ಮದುವೆಯಾದಾಗಿನಿಂದ ಅತಿಯಾದ ಮಡಿವಂತಿಕೆ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಹೆಂಡತಿಯ ಮಡಿವಂತಿಕೆಯೇ ಗಂಡ ಕೊಲೆ ಮಾಡಲು ಕಾರಣ ಎಂಬ ವಿಷಯ ಬೆಳಕಿಗೆ ಬಂದಿದೆ. ಮಡಿವಂತಿಕೆ ಹೆಸರಿನಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೆ ಪ್ರತಿದಿನ ಹತ್ತಾರು ಬಾರಿ ಸ್ನಾನ ಮಾಡಿಸುತ್ತಿದ್ದಳು. ಇಷ್ಟೇ ಅಲ್ಲದೇ, ಪ್ರತಿ ಸಲ ಮನೆಯಿಂದ ಹೊರ ಹೋಗಿ ಬಂದಾಗ ಸ್ನಾನ ಮಾಡುವಂತೆ ಗಂಡ ಮತ್ತು ಮಕ್ಕಳನ್ನು ಪೀಡಿಸುತ್ತಿದ್ದಳು ಎನ್ನಲಾಗಿದೆ.
ಗಂಡ ಭತ್ತದ ವ್ಯಾಪಾರಿಯಾಗಿದ್ದು, ಆತ ಭತ್ತ ಮಾರಿ ತಂದ ದುಡ್ಡನ್ನು ಸಹ ತೊಳೆದು ಮನೆಯೊಳಗೆ ಇಡುತ್ತಿದ್ದಳು ಎಂಬ ಮತ್ತೊಂದು ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. ಈ ಮಡಿವಂತಿಕೆ ವಿಷಯವಾಗಿ ಗಂಡ-ಹೆಂಡತಿ ನಡುವೆ ಅನೇಕ ಬಾರಿ ಜಗಳಗಳೂ ಸಹ ನಡೆದಿದ್ದವು. ಇದು ಅತಿರೇಕಕ್ಕೆ ಹೋಗಿ ಶಾಂತಮೂರ್ತಿ ಪುಟ್ಟಮಣಿ ಮೇಲೆ ಹಲ್ಲೆ ಸಹ ಮಾಡಿದ್ದ ಎನ್ನಲಾಗಿದೆ.
ಹೆಂಡತಿಯ ಅತಿಯಾದ ಮಡಿಪಾಲನೆಯಿಂದ ಶಾಂತಮೂರ್ತಿ ಪ್ರತಿದಿನ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದನೆನ್ನಲಾಗಿದೆ. ನಿನ್ನೆ ಕೂಡ ತೋಟದಲ್ಲಿದ್ದಾಗ ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಆರಂಭವಾಗಿತ್ತು. ಈಗಾಗಲೇ ರೋಸಿ ಹೋಗಿದ್ದ ಶಾಂತಮೂರ್ತಿ ಕೋಪಗೊಂಡು ಮಚ್ಚಿನಿಂದ ಹೆಂಡತಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಬಳಿಕ ತೋಟದಿಂದ ಮನೆಗೆ ಸೌದೆ ತಂದಿಟ್ಟು ತಾನೂ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮಕ್ಕಳು ಶಾಲೆಯಿಂದ ಮನೆಗೆ ಬಂದ ಮೇಲೆ ವಿಷಯ ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ತಡರಾತ್ರಿ ಜಮೀನಿನಲ್ಲಿ ಹೆಂಡತಿ ಪುಟ್ಟಮಣಿಯ ಮೃತದೇಹ ಪತ್ತೆಯಾಗಿದೆ. ಘಟನೆ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.