ಕರ್ನಾಟಕ

ಮೂಲ ಬಿಜೆಪಿ ನಾಯಕರ ಕಡೆಗಣನೆ; ಪ್ರಮಾಣ ವಚನ ಸಮಾರಂಭಕ್ಕೆ ಉಮೇಶ್ ಕತ್ತಿ ಗೈರು

Pinterest LinkedIn Tumblr

ಬೆಂಗಳೂರು: ನೂತನ ಹತ್ತು ಮಂದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಬೆಳಗ್ಗೆ ಮುಖ್ಯಮಂತ್ರಿ ನಿವಾಸಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಒಟ್ಟಾಗಿ ಆಗಮಿಸಿ ಮಾತುಕತೆ ನಡೆಸಿದರು.

ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಬಿಜೆಪಿ ಶಾಸಕ ಉಮೇಶ್ ಕತ್ತಿ ಅಸಮಾಧಾನ ತಣಿಸುವ ಜವಾಬ್ದಾರಿಯನ್ನು ರಾತ್ರಿ ಈ ಇಬ್ಬರು ಹಿರಿಯ ಸಚಿವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ವಹಿಸಿದ್ದರು. ರಾತ್ರಿಯಿಂದ ಈವರೆಗೂ ಉಮೇಶ್ ಕತ್ತಿ ಯಾರ ಸಂಪರ್ಕಕ್ಕೂ ಸಿಗಲಿಲ್ಲ ಎನ್ನಲಾಗಿದೆ.

ರಹಸ್ಯ ಸ್ಥಳದಲ್ಲಿ ಉಮೇಶ್ ಕತ್ತಿ ಠಿಕಾಣಿ ಹೂಡಿದ್ದು, ತಮ್ಮ ಆಪ್ತರ ಬಳಿ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ. ಇಂದೂ ಕತ್ತಿ ಮನವೂಲಿಕೆಗಾಗಿ ಅವರನ್ನು ಸಂಪರ್ಕಿಸಲು ಪ್ರಯತ್ನ ಮುಂದುವರಿದಿದೆ.

ಕಳೆದ ಒಂದು ವಾರದಿಂದ 10+3 ಸೂತ್ರದಂತೆ ವಲಸಿಗರ ಜೊತೆಗೆ 3 ಜನ ಬಿಜೆಪಿ ಶಾಸಕರಿಗೂ ಸಚಿವ ಸ್ಥಾನ ನೀಡುವ ಕುರಿತು ಬಿಎಸ್​ವೈ ಹೇಳಿಕೆ ನೀಡಿದ್ದರು. ಈ ಪಟ್ಟಿಯಲ್ಲಿ ಉತ್ತರ ಕರ್ನಾಟಕದ ಕಮಲ ಪಾಳಯದ ಹಿರಿಯ ನಾಯಕ ಉಮೇಶ್ ಕತ್ತಿ ಹೆಸರು ಪ್ರಮುಖವಾಗಿತ್ತು.

ಉಮೇಶ್ ಕತ್ತಿ ಸಹ ಪ್ರತಿನಿತ್ಯ ಸಚಿವ ಸ್ಥಾನಕ್ಕಾಗಿ ಸಿಎಂ ಮನೆಗೆ ಎಡತಾಕುತ್ತಿದ್ದರು. ಹೀಗಾಗಿ ವಲಸಿಗ ಶಾಸಕರ ಜೊತೆಗೆ ಇಂದು ಉಮೇಶ್ ಕತ್ತಿ ಸಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದೇ ವಿಶ್ಲೇಷಿಸಲಾಗಿತ್ತು. ಆದರೆ, ಬಿಎಸ್​ವೈ ಈ ಎಲ್ಲಾ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ.

ಕೇವಲ ವಲಸಿಗ ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡಿರುವ ಬಿಎಸ್​ವೈ ಮೂಲ ಬಿಜೆಪಿ ನಾಯಕರನ್ನು ಕಡೆಗಣಿಸಿದ್ದಾರೆ ಎಂಬ ಮಾತುಗಳು ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿದೆ. ಬಿಎಸ್​ವೈ ನಡೆಯಿಂದ ಸಂಪೂರ್ಣ ಬೇಸತ್ತಿರುವ ಉಮೇಶ್ ಕತ್ತಿ ಇದೀಗ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗುತ್ತಿದೆ.

Comments are closed.