ಕರ್ನಾಟಕ

ಸಿದ್ದು ಕೆನ್ನೆ ಹಿಡಿದ ಯುವತಿ

Pinterest LinkedIn Tumblr


ಬಾಗಲಕೋಟೆ: ಬಾದಾಮಿ ಕ್ಷೇತ್ರದಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಇಂದು ಕ್ಷೇತ್ರದ ಗಿಡ್ಡನಾಯಕನಾಳ ಗ್ರಾಮದಲ್ಲಿ ಯುವತಿಯೊಬ್ಬಳು ವಿಶೇಷ ಅಭಿಮಾನ ವ್ಯಕ್ತಪಡಿಸಿದ್ದಾಳೆ.

ಗ್ರಾಮದಲ್ಲಿ ಕನಕದಾಸ ಜಯಂತಿ, ಬೀರಲಿಂಗೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರು ಸಿದ್ದರಾಮಯ್ಯ ಅವರನ್ನ ಸನ್ಮಾನಿಸಿದರು. ಈ ವೇಳೆ ಯುವತಿಯೊಬ್ಬಳು ಸಿದ್ದರಾಮಯ್ಯಗೆ ಪೇಟಾ ತೊಡಿಸಿ ಕೆನ್ನೆ ಹಿಡಿದು ನಿಂತರು. ನಂತರ ಕಾಲಿಗೆ ನಮಸ್ಕರಿಸಿ ಅಭಿಮಾನ ವ್ಯಕ್ತಪಡಿಸಿದರು.

ಕೆನ್ನೆ ಸವರಿ, ಕಾಲು ಮುಟ್ಟಿ ನಮಸ್ಕರಿಸಿದ ಯುವತಿ ಅಭಿಮಾನಕ್ಕೆ ನಸುನಗುತ್ತಲೇ ಸಿದ್ದರಾಮಯ್ಯ ಫೋಟೋಗೆ ಪೋಸ್ ನೀಡಿದರು. ಇದಕ್ಕೂ ಮೊದಲು ಸಿದ್ದರಾಮಯ್ಯ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಯುವಕರ ದಂಡು ಹೌದು ಹುಲಿಯಾ ಎಂದು ಕೂಗಾಡಿದರು. ಸಿದ್ದರಾಮಯ್ಯ ಹೋದಲ್ಲೆಲ್ಲಾ ಹೌದು ಹುಲಿಯಾ ಘೋಷಣೆ ಕೇಳಿ ಬರುತ್ತಲೇ ಇತ್ತು. ಸಿದ್ದರಾಮಯ್ಯ ಎರಡನೇ ದಿನದ ಪ್ರವಾಸದಲ್ಲಿ ಇಡೀ ದಿನ ಮಾಧ್ಯಮಗಳಿಂದ ದೂರವೇ ಉಳಿದರು. ರಾಜ್ಯ ರಾಜಕೀಯ ಬೆಳವಣಿಗೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಬೆಳಗ್ಗೆ ಮಾಧ್ಯಮದವರನ್ನು ನೋಡುತ್ತಲೇ ಏ ನಿಮಗೇನು ಕೆಲಸ ಇಲ್ವಾ? ಬೆಳಗ್ಗೆ ಸಾಯಂಕಾಲ ಅಂತ ಗರಂ ಆದರು. ವಿವಿಧ ಕೆಲಸ ಕಾರ್ಯಕ್ಕೆಂದು ಬಂದಿದ್ದ ಜನರಿಗೆ ಏ ಸರ್ಕಾರದ ಬಜೆಟ್‍ಗೆ ದುಡ್ಡು ಇಲ್ಲ. ಬಜೆಟ್ ಬಳಿಕ ನೋಡೋಣ ಎಂದು ಸಾಗಹಾಕಿದರು. ಈ ವೇಳೆ ಅಲ್ಲಿದ್ದ ಕ್ಯಾಮರಾಮ್ಯಾನ್‍ಗಳ ವಿರುದ್ಧವೂ ರೇಗಾಡಿದ ಸಿದ್ದರಾಮಯ್ಯ, ಏ ಹೋಗ್ರಯ್ಯ ಇವರನ್ನು ಆಚೆ ಕಳಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Comments are closed.