ಕರ್ನಾಟಕ

ಕಲ್ಯಾಣ ಕರ್ನಾಟಕದ ರಾಜುಗೌಡ, ದತ್ತಾತ್ರೇಯ ಪಾಟೀಲರಿಗೆ ಸಚಿವ ಸ್ಥಾನ ನೀಡಿ: ಬಸನಗೌಡ ಪಾಟೀಲ ಯತ್ನಾಳ ಒತ್ತಾಯ

Pinterest LinkedIn Tumblr

ವಿಜಯಪುರ: ಕಲ್ಯಾಣ ಕರ್ನಾಟಕ ಬಿಜೆಪಿ ಶಾಸಕರಿಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬೆಂಬಲ ನೀಡಿದ್ದಾರೆ. “ಮಲ್ಲಿಕಾರ್ಜುನ ಖರ್ಗೆ ಅಂಥವರನ್ನು ಸೋಲಿಸಿದ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು. ಈ ಮೂಲಕ ಆ ಭಾಗದಲ್ಲಿ ಬಿಜೆಪಿ ಬಲಪಡಿಸಲು ಅನುಕೂಲವಾಗುತ್ತದೆ. ರಾಜುಗೌಡ, ದತ್ತಾತ್ರೇಯ ಪಾಟೀಲ ಅವರ ಭಾವನೆಗಳಿಗೆ ಸ್ಪಂದಿಸಬೇಕು. ಅವರ ಬೇಡಿಕೆಗೆ ನನ್ನ ಬೆಂಬಲವಿದೆ. ಪ್ರಾದೇಶಿಕ ಸಮಾನತೆ ಕಾಪಾಡಬೇಕು. ಸಚಿವ ಸ್ಥಾನ ವಂಚಿತ ಜಿಲ್ಲೆಗಳಿಗೂ ಸ್ಥಾನಮಾನ ನೀಡಬೇಕು. ಅದಕ್ಕಾಗಿ ಕೆಲವರು ತ್ಯಾಗ ಮಾಡಲೇಬೇಕು,” ಎಂದು ಒತ್ತಾಯಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ, ಸರ್ಕಾರ ರಚನೆಯಲ್ಲಿ ಸಿ. ಪಿ. ಯೋಗೇಶ್ವರ್​ ಮತ್ತು ರಮೇಶ ಜಾರಕಿಹೊಳಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬಹಳಷ್ಟು ಸಚಿವರು ಈ ಮೊದಲು ಸರಕಾರ ರಚಿಸಿ, ನಾವು ಸಚಿವ ಸ್ಥಾನ ಕೇಳುವುದಿಲ್ಲ ಎಂದು ಈ ಹಿಂದೆ ಯಡಿಯೂರಪ್ಪನವರಿಗೆ ಹೇಳಿದ್ದರು. ಈಗ ಅಂಥವರು ಸಿಎಂ ಬಳಿ ತೆರಳಿ ಸಚಿವ ಸ್ಥಾನ ಬಿಡುವುದಾಗಿ ಹೇಳಬೇಕು ಎಂದು ಹೇಳಿದರು.

ಅಸಮಾಧಾನ ಹೊಂದಿರುವ ಶಾಸಕರು ಸಭೆ ನಡೆಸುವುದರಲ್ಲಿ ತಪ್ಪಿಲ್ಲ. ಎಲ್ಲರೂ ಒಂದು ಕಡೆ ಸೇರಿ ಚರ್ಚಿಸುವುದು ಭಿನ್ನಮತ ಮತ್ತು ಅತೃಪ್ತಿಯಲ್ಲ. ಆ ಭಾಗದ ಜನರ ಭಾವನೆಗಳನ್ನು ತಿಳಿಸಲು ಸಿಎಂ ಮೇಲೆ ಒತ್ತಡ ಹೇರುವುದು ತಪ್ಪಲ್ಲ ಎಂದು ಹೇಳುವ ಮೂಲಕ ಅಸಮಾಧಾನಿತ ಮೂಲ ಬಿಜೆಪಿ ಶಾಸಕರ ನಡೆಯನ್ನು ಯತ್ನಾಳ್ ಸಮರ್ಥಿಸಿಕೊಂಡರು.

ಮಹೇಶ ಕುಮಟಳ್ಳಿಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ, ಕುಮಟಳ್ಳಿ ಅವರ ರಾಜೀನಾಮೆ ಅವಶ್ಯವಿರಲಿಲ್ಲ. ಆದರೂ ಯಡಿಯೂರಪ್ಪ ಸಿಎಂ ಆಗಲಿ, ಸರಕಾರ ಬರಲಿ ಎಂದು, ಜೊತೆಗೆ ರಮೇಶ ಜಾರಕಿಹೊಳಿ ಅವರಿಗೆ ಆಗುತ್ತಿದ್ದ ಅನ್ಯಾಯ ಪ್ರತಿಭಟಿಸಿ ರಾಜೀನಾಮೆ ನೀಡಿದ್ಧಾರೆ. ರಾಜೀನಾಮೆ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಆಶ್ವಾಸನೆ ಕೊಟ್ಟಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಸಿಎಂ ಆಶ್ವಾಸನೆ ಕೊಟ್ಟಿದ್ದರೆ ಅದನ್ನು ಈಡೇರಿಸಲಿ ಎಂದರು.

ರಮೇಶ್ ಜಿಗಜಿಣಗಿಗೆ ಸವಾಲು

ಯತ್ನಾಳ್ ನಾಯಕ ಅಲ್ಲ ಎಂದು ಹೇಳಿದ್ದ ರಮೇಶ ಜಿಗಜಿಣಗಿ ಹೇಳಿಕೆಗೆ ಯತ್ನಾಳ ತಿರುಗೇಟು ನೀಡಿದರು. ನಾನು ನಾಯಕ ಅಲ್ಲ ಎನ್ನಲು ಇವರು ಯಾರು? ಇವರ ಸರ್ಟಿಫಿಕೇಟ್​​​ನಿಂದ ನಾನೇನು ಶಾಸಕ, ಸಂಸದನಾಗಿಲ್ಲ. ಈವರೆಗೆ ವಿಜಯಪುರ ಜಿಲ್ಲೆಯಲ್ಲಿ ನಾನಾ ಮಾಡಿದ ಕೆಲಸಗಳ ಬೋರ್ಡ್​​ಗಳಲ್ಲಿ ಹೆಸರಿವೆ. ಜಿಗಜಿಣಗಿ 15 ವರ್ಷಗಳಲ್ಲಿ ಎಲ್ಲಿ ಕೆಲಸ ಮಾಡಿದ್ದಾರೆ ಎಂಬುದರ ಬೋರ್ಡ್ ತೋರಿಸಲಿ ಎಂದು ಸವಾಲು ಹಾಕಿದರು.ಸಂಸದ ಅನಂತಕುಮಾರ ಹೆಗಡೆ ಗಾಂಧೀಜಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ವಿಚಾರಚಾಗಿ ಪ್ರತಿಕ್ರಿಯಿಸಿದ ಯತ್ನಾಳ್, ಅವರ ಹೇಳಿಕೆಯನ್ನು ನಾನು ಸಂಪೂರ್ಣವಾಗಿ ನೋಡಿಲ್ಲ ಎಂದರು.

Comments are closed.