ಕರ್ನಾಟಕ

ಶೀಲ ಶಂಕಿಸಿ ಹೆಂಡತಿಯ ಹತ್ಯೆ: ಮಲಗಿದ್ದವಳು ಏಳಲೇ ಇಲ್ಲ ಎಂದು ಸಂಬಂಧಿಕರಿಗೆ ಕರೆ ಮಾಡಿದ್ದ

Pinterest LinkedIn Tumblr


ಬಳ್ಳಾರಿ: ರಾತ್ರಿ ಮಲಗಿದ ಪತ್ನಿ ಮತ್ತೆ ಏಳಲೇ ಇಲ್ಲ. ಅವಳು ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಸಂಬಂಧಿಕರಿಗೆ ಕರೆ ಮಾಡಿ ಕಥೆ ಕಟ್ಟಿದ್ದ ಪತಿಯನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

ಸಂಡೂರು ತಾಲೂಕಿನ ಸುಸಿಲಾ ನಗರದ ನಿವಾಸಿ ಢಾಕ್ಯಾ ನಾಯಕ್ ಬಂಧಿತ ಆರೋಪಿ. ಶಾರದಾಬಾಯಿ ಕೊಲೆಯಾದ ಪತ್ನಿ. ಢಾಕ್ಯಾ ನಾಯಕ್ ಶುಕ್ರವಾರ ರಾತ್ರಿ ಪತ್ನಿಯನ್ನು ಕೊಲೆ ಮಾಡಿದ್ದ.

ಢಾಕ್ಯಾ ನಾಯಕ್ ಎಂಟು ವರ್ಷಗಳ ಹಿಂದೆ ಶಾರದಾಬಾಯಿ ಜೊತೆಗೆ ಮದುವೆಯಾಗಿದ್ದ. ಆದರೆ ಪದೇ ಪದೇ ಪತ್ನಿಯ ಶೀಲದ ಮೇಲೆ ಗಂಡ ಸಂಶಯ ವ್ಯಕ್ತಪಡಿಸುತ್ತಿದ್ದ. ಎರಡು ದಿನಗಳ ಹಿಂದೆ ಢಾಕ್ಯಾ ನಾಯಕ್ ಪತ್ನಿಯ ಜೊತೆ ಇದೇ ವಿಷಯಕ್ಕೆ ಜಗಳ ಮಾಡಿಕೊಂಡಿದ್ದ. ಜಗಳ ವಿಕೋಪಕ್ಕೆ ತಿರುಗಿದಾಗ ಅಕ್ಕ ಪಕ್ಕದ ಮನೆಯವರು ಜಗಳ ಬಿಡಿಸಿದ್ದರು.

ಆರೋಪಿ ಶುಕ್ರವಾರ ರಾತ್ರಿ ಪತ್ನಿ ಹಾಗೂ ಮಕ್ಕಳೊಂದಿಗೆ ಊಟ ಮಾಡಿದ್ದ. ಬಳಿಕ ತನ್ನ ಇಬ್ಬರು ಮಕ್ಕಳನ್ನು ಮನೆಯ ಹೊರಗೆ ಮಲಗಲು ಹೇಳಿ ತಾನು ಒಳಗೆ ಮಲಗಿದ್ದ. ಈ ವೇಳೆ ಪತ್ನಿ ನಿದ್ದೆಗೆ ಜಾರಿದಾಗ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಪತ್ನಿಯ ಮನೆಯವರಿಗೆ ಕರೆ ಮಾಡಿ, ರಾತ್ರಿ ಮಲಗಿದ ನನ್ನ ಹೆಂಡತಿ ಮತ್ತೆ ಏಳುತ್ತಲೇ ಇಲ್ಲ. ಅವಳಿಗೆ ಹೃದಯಾಘಾತ ಆಗಿರಬಹುದು ಎಂದು ನಾಟಕವಾಡಿದ್ದ.

ವಿಷಯ ತಿಳಿದು ಮನೆಗೆ ಬಂದ ಶಾರದಾಬಾಯಿ ಸಂಬಂಧಿಕರು ಕೊಲೆ ಅನುಮಾನ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ಕರೆ ಮಾಡಿದ್ದರು. ಸ್ಥಳಕ್ಕೆ ಆಗಮಿಸಿದ ಸಂಡೂರು ಪೊಲೀಸರು ಪರಿಶೀಲನೆ ನಡೆಸಿದಾಗ ಶಾರದಾ ಅವರ ಕುತ್ತಿಗೆ ಸುತ್ತ ಸಣ್ಣ ಪುಟ್ಟ ಗಾಯಗಳಾಗಿದ್ದನ್ನು ಗಮನಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಶಾರದಾಬಾಯಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಸಂಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Comments are closed.