ಕರ್ನಾಟಕ

ಸುಪ್ರೀಂನಿಂದ ಮಂಡ್ಯದಲ್ಲಿ 65 ದೇವಸ್ಥಾನ, 4 ಮಸೀದಿಗಳ ತೆರವಿಗೆ ಆದೇಶ

Pinterest LinkedIn Tumblr


ಮಂಡ್ಯ: ಜಿಲ್ಲೆಯಲ್ಲಿ ಸಾರ್ವಜನಿಕ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ 65 ದೇವಾಲಯಗಳು ಹಾಗೂ 4 ಮಸೀದಿಗಳನ್ನು ತೆರವು ಮಾಡುವಂತೆ ಸುಪ್ರೀಂ ಕೋರ್ಟ್ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಇದೀಗ ಜಿಲ್ಲಾಡಳಿತ ಸಾರ್ವಜನಿಕ ಜಾಗದಲ್ಲಿ ತಲೆ ಎತ್ತಿರುವ ದೇವಾಲಯಗಳು ಹಾಗೂ ಮಸೀದಿಗಳನ್ನು ತೆರವು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಜಿಲ್ಲಾಡಳಿತ ದೇವಸ್ಥಾನಗಳು ಹಾಗೂ ಮಸೀದಿಗಳನ್ನು ತೆರವು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಜಿಲ್ಲಾಡಳಿತ ಸಾರ್ವಜನಿಕ ಜಾಗದಲ್ಲಿ ನಿರ್ಮಾಣವಾಗಿರುವ ದೇವಸ್ಥಾನ ಹಾಗೂ ಮಸೀದಿಗಳನ್ನು ತೆರವು ಮಾಡಲು ಮುಂದಾಗಿದ್ದು, ಈ ಹಿನ್ನೆಯಲ್ಲಿ ದೇವಸ್ಥಾನಗಳ ಹಾಗೂ ಮಸೀದಿಗಳ ಟ್ರಸ್ಟಿಗೆ ಹಾಗೂ ಮುಖ್ಯಸ್ಥರಿಗೆ ನೋಟಿಸ್ ಕೂಡ ನೀಡಿದೆ. ದೇವಸ್ಥಾನ ಹಾಗೂ ಮಸೀದಿಗಳಿಗೆ ಸೇರಿದ ದಾಖಲೆ ಪತ್ರಗಳನ್ನು ಜಿಲ್ಲಾಡಳಿತಕ್ಕೆ ನೀಡುವಂತೆ ಸೂಚನೆ ನೀಡಿದೆ. ದಾಖಲೆಯನ್ನು ಸಲ್ಲಿಕೆ ಮಾಡಲು ನಾಳೆ ಕೊನೆಯ ದಿನಾಂಕವಾಗಿದೆ.

ಸಾರ್ವಜನಿಕ ಜಾಗದಲ್ಲಿ ನಿರ್ಮಾಣ ಮಾಡಿರುವ ದೇವಸ್ಥಾನಗಳು ಮಂಡ್ಯ ನಗರ ಪ್ರದೇಶಗಳಲ್ಲಿ ಅಯ್ಯಪ್ಪ ದೇವಸ್ಥಾನ, ಆದಿಶಕ್ತಿ ಮಾರಮ್ಮ, ಚಾಮುಂಡೇಶ್ವರಿ ದೇವಸ್ಥಾನ, ಗಣೇಶ ದೇವಸ್ಥಾನ, ಮಹದೇಶ್ವರ ದೇವಸ್ಥಾನ, ಎಡಮುರಿ ಗಣಪತಿ ದೇವಸ್ಥಾನ, ಸುಬ್ರಹ್ಮಣ್ಯ ನಾಗರಕಟ್ಟೆ, ಮಾರಮ್ಮ ದೇವಸ್ಥಾನ, ಬಸವೇಶ್ವರ ದೇವಸ್ಥಾನ, ಬೃಂದಾವನದ ದೇವಾಲಯ ಸೇರಿದಂತೆ ಮೊದಲಾದ ದೇವಸ್ಥಾನಗಳನ್ನು ಪಟ್ಟಿ ಮಾಡಲಾಗಿದೆ.

ಈ ಪೈಕಿ 4 ಮಸೀದಿಗಳನ್ನು ಸಹ ಗುರುತಿಸಲಾಗಿದೆ. ಶೀಘ್ರದಲ್ಲಿ ಈ ದೇವಸ್ಥಾನಗಳು ಹಾಗೂ ಮಸೀದಿಗಳನ್ನು ತೆರವುಗೊಳಿಸಲಾಗುತ್ತದೆ ಎಂದು ಮಂಡ್ಯ ಜಿಲ್ಲಾಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ. ನ್ಯಾಯಾಲಯದ ಈ ನಿರ್ದೇಶನಕ್ಕೆ ಭಕ್ತರು ಹಾಗೂ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧದ ನಡುವೆ ದೇವಸ್ಥಾನ ಹಾಗೂ ಮಸೀದಿಗಳನ್ನು ಹೇಗೆ ತೆರವುಗೊಳಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Comments are closed.