ಕರ್ನಾಟಕ

ಬಿಜೆಪಿಯಲ್ಲೂ ಬಂಡಾಯ ಸಾರಿದ ರಮೇಶ್ ಜಾರಕಿಹೊಳಿ?

Pinterest LinkedIn Tumblr

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಈಗ ಸಾಕಷ್ಟು ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಸಚಿವ ಸಂಪುಟ ವಿಸ್ತರಣೆ ವಿಳಂಬ, ಗೊಂದಲ ಹಿನ್ನೆಲೆಯಲ್ಲಿ ಪಕ್ಷಾಂತರಿ ಶಾಸಕರು ಹಾಗೂ ಮೂಲ ಬಿಜೆಪಿ ಆಕಾಂಕ್ಷಿ ಶಾಸಕರು ಅಸಮಧಾನಗೊಂಡಿದ್ದಾರೆ. ಸಂಪುಟ ಸೇರ್ಪಡೆ ಸಂಘರ್ಷದ ಜೊತೆ ಜೊತೆಗೇ ಖಾತೆಗಾಗಿ ಪಟ್ಟು ಕಾಳಗವೂ ಜೋರಾಗಿದೆ. ಈ ಬೆನ್ನಲ್ಲೇ ಮಿತ್ರಮಂಡಳಿ ಗುಂಪಿನ ನಾಯಕರಾಗಿರುವ ರಮೇಶ್ ಜಾರಕಿಹೊಳಿ ರಾಜೀನಾಮೆಯ ಮೆಗಾ ಬಾಂಬ್ ಸಿಡಿಸಿದ್ದಾರೆ ಎನ್ನಲಾಗಿದೆ.

ನನಗೆ ಡಿಸಿಎಂ ಸ್ಥಾನ ಬೇಕಾಗಿಲ್ಲ. ನನಗೆ ಅದೇ ಖಾತೆ ಬೇಕು ಅಂದ್ರೆ ಬೇಕು. ಆ ಖಾತೆ ಸಿಗದಿದ್ದರೆ ನಾನು ರಿಸೈನ್ ಮಾಡ್ತೀನಿ ಎಂದು ಯಡಿಯೂರಪ್ಪ ಮುಂದೆ ರಮೇಶ್ ಜಾರಕಿಹೊಳಿ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ಹೇಳಲಾಗಿದೆ.

ಅಷ್ಟಕ್ಕೂ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಖಾತೆಯೇ ಬೇಕೆಂದು ತೀವ್ರ ಪಟ್ಟು ಹಿಡಿದು ಕೂತಿದ್ದಾರೆ ಎನ್ನಲಾಗಿದೆ. ಮೈತ್ರಿ ಅವಧಿಯಲ್ಲಿ ಡಿಕೆಶಿ ಪಡೆದಿದ್ದ ಜಲಸಂಪನ್ಮೂಲ ಖಾತೆಯೇ ಬೇಕು. ನನ್ನನ್ನು ಡಿಸಿಎಂ ಕೂಡ ಮಾಡಬೇಡಿ. ಆದರೆ ಸಚಿವ ಪದವಿ ಜತೆಗೆ ಜಲಸಂಪನ್ಮೂಲ ಇಲಾಖೆಯನ್ನೇ ಕೊಡಿ ಎಂದು ರಮೇಶ್ ಜಾರಕಿಹೊಳಿ ಪ್ರಬಲವಾಗಿ ಬೇಡಿಕೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಡಿಕೆಶಿಗೆ ಚಾಲೆಂಜ್ ಮಾಡಿ ನಾನು ರಾಜೀನಾಮೆ ಕೊಟ್ಟು ಬಂದೆ. ಜಲಸಂಪನ್ಮೂಲ ಖಾತೆಯನ್ನೇ ತೆಗೆದುಕೊಂಡು ಬರ್ತೀನಿ ಎಂದು ಚಾಲೆಂಜ್ ಮಾಡಿದ್ದೆ. ಹಾಗಾಗಿ ಸ್ವಾಭಿಮಾನಕ್ಕಾಗಿ ನನ್ನ ರಾಜಕೀಯ ಭವಿಷ್ಯ ಲೆಕ್ಕಿಸದೇ ರಾಜೀನಾಮೆ ನೀಡಿ ಬಿಜೆಪಿಗೆ ಬಂದಿದ್ದೇನೆ. ಈಗ ಆ ಖಾತೆಯೆ ಸಿಗಲಿಲ್ಲ ಅಂದ್ರೆ ನನ್ನ ಸ್ವಾಭಿಮಾನ ಮತ್ತು ಚಾಲೆಂಜ್‍ಗೆ ಧಕ್ಕೆ ಬರುತ್ತೆ. ಕೊಟ್ರೆ ಆ ಖಾತೆಯನ್ನೇ ಕೊಡಿ, ಇಲ್ಲ ಅಂದ್ರೆ ನಾನು ಈಗ ಮತ್ತೆ ರಿಸೈನ್ ಮಾಡ್ತೀನಿ ಎಂದು ಯಡಿಯೂರಪ್ಪ ಎದುರೇ ರಮೇಶ್ ಜಾರಕಿಹೊಳಿ ಬಾಂಬ್ ಸಿಡಿಸಿದ್ದಾರೆ ಎನ್ನಲಾಗಿದೆ.

ರಮೇಶ್ ಜಾರಕಿಹೊಳಿ ಮಾತಿಗೆ ಸಿಎಂ ಯಡಿಯೂರಪ್ಪ ತೆಲೆಕೆಡಿಸಿಕೊಂಡಿದ್ದಾರಂತೆ. ಸದ್ಯಕ್ಕೆ ಸಂಪುಟ ವಿಸ್ತರಣೆ ಈ ತಿಂಗಳಲ್ಲೇ ಸುಸೂತ್ರವಾಗಿ ನಡೆದರೆ ಸಾಕೆಂದು ಒದ್ದಾಡುತ್ತಿರುವ ಸಿಎಂಗೆ ಬೆಳಗಾವಿ ಸಾಹುಕಾರ್‍ನ ಈ ಹೊಸ ಆಟ ಪೇಚಿಗೆ ಸಿಲುಕಿಸಿದೆಯಂತೆ. ಹಾಗಾದ್ರೆ ರಮೇಶ್ ಜಾರಕಿಹೊಳಿ ಖಾತೆಗಾಗಿ ಒತ್ತಡ ತಂತ್ರ ಹಾಕ್ತಿದ್ದಾರಾ..? ಒಂದು ವೇಳೆ ಜಲಸಂಪನ್ಮೂಲ ಖಾತೆ ಸಿಗದಿದ್ದರೆ ನಿಜಕ್ಕೂ ಅವರು ರಾಜೀನಾಮೆ ಮಾಡ್ತಾರಾ ಎಂಬ ಈ ಪ್ರಶ್ನೆಗಳಿಗೆ ಸದ್ಯದಲ್ಲೇ ಉತ್ತರ ಸಿಗಲಿದೆ.

Comments are closed.