ಕರ್ನಾಟಕ

ಸೂಕ್ತ ಬೆಲೆ ಸಿಗದೆ ರೋಸಿಹೋಗಿ ಟೊಮ್ಯಾಟೋ ರಸ್ತೆಗೆಸೆದ ರೈತ

Pinterest LinkedIn Tumblr


ರಾಯಚೂರು: ಸಾವಿರಾರು ಖರ್ಚು ಮಾಡಿ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಕಾರಣ ರೋಸಿಹೋದ ರೈತನೋರ್ವ ಮಾರುಕಟ್ಟೆಗೆ ತಂದ ಟೊಮ್ಯಾಟೊಗಳನ್ನು ಬೀದಿಗೆಸೆದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

ನಗರದ ಹತ್ತಿ ಮಾರುಕಟ್ಟೆ ಪ್ರಾಂಗಣದಲ್ಲಿ ಬೆಳಗ್ಗೆ ತರಕಾರಿ ಖರೀದಿ ನಡೆಯುತ್ತದೆ. ಕೆಜಿ ಟೊಮ್ಯಾಟೊಗೆ 2 ರೂ.ನಂತೆ ವರ್ತಕರು ದರ ನಿಗದಿ ಮಾಡಿದ್ದಾರೆ. ಆದರೆ, ಕನಿಷ್ಠ 3 ರೂಪಾಯಿ ಕೊಡುವಂತೆ ಮನವಿ ಮಾಡಿದರೂ ವರ್ತಕರು ಮಣೆ ಹಾಕಿಲ್ಲ. ಇದರಿಂದ ಸಿಟ್ಟಿಗೇರಿದ ರೈತ, ನಿಮಗೆ ಬೇಕಾಬಿಟ್ಟಿ ದರಕ್ಕೆ ನೀಡುವುದಕ್ಕಿಂತ ರಸ್ತೆಗೆಸೆಯುವುದೇ ಲೇಸು ಎಂದು ಈ ರೀತಿ ಮಾಡಿದ್ದಾನೆ.

ಮೊದಲು ಅಕ್ಕಪಕ್ಕದ ಜನರಿಗೆ ಕೂಲಿಕಾರ್ಮಿಕರಿಗೆ , ಹೋಟೆಲ್ ಮಾಲೀಕರಿಗೆ ಉಚಿತವಾಗಿ ಟೊಮ್ಯೊಟೊ ಹಂಚಿದ್ದಾರೆ. ಬಳಿಕ ಸುಮಾರು ಮೂರ್ನಾಲ್ಕು ಕ್ವಿಂಟಲ್ ಉಳಿದಿದ್ದು ಮಾರುಕಟ್ಟೆ ಎದುರೇ ರಸ್ತೆಗೆ ಎಸೆದಿದ್ದಾನೆ.

ಒಂದು ಎಕರೆ ಟೊಮ್ಯೊಟೊ ಬೆಳೆಯಲು ಕನಿಷ್ಠ 30ರಿಂದ 40 ಸಾವಿರ ರೂ. ಖರ್ಚು ಮಾಡಿದ್ದಾರೆ. ಹಗಲಿರುಳೆನ್ನದೆ ನೀರು ಕಟ್ಟಿದ್ದಾರೆ. ಮುದುರು, ಬೂದು ರೋಗ ಕಾಟವಿದ್ದು ಕಾಲಕಾಲಕ್ಕೆ ರಾಸಾಯನಿಕ ಸಿಂಪಡಿಸಬೇಕಿದೆ. ಇಲ್ಲವಾದರೆ ಬೆಳೆಯೇ ಕೈಗೆಟುಕುವುದಿಲ್ಲ. ಆದರೆ, ಮಾರುಕಟ್ಟೆಯಲ್ಲಿ ಕೆಜಿಗೆ 8ರಿಂದ 10 ರೂ. ದರವಿದ್ದರೂ ರೈತರಿಗೆ ಮಾತ್ರ ಅರ್ಧದಷ್ಟು ಕೂಡ ಸಿಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.