ರಾಷ್ಟ್ರೀಯ

ಬಿಜೆಪಿ ಮಾಜಿ ಕೌನ್ಸಿಲರ್ ನಿಂದ ಪತ್ನಿಗೆ ತಲಾಖ್

Pinterest LinkedIn Tumblr


ಭೋಪಾಲ್: ದೇಶದಲ್ಲಿ ತ್ರಿವಳಿ ತಲಾಖ್ ರದ್ದುಗೊಂಡಿದ್ದರೂ ಮಧ್ಯಪ್ರದೇಶದ ಶಿವಪುರಿಯ ಮಾಜಿ ಕೌನ್ಸಿಲರ್ ತನ್ನ ಪತ್ನಿಗೆ ತಲಾಖ್ ನೀಡಿದ್ದಾನೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿವಪುರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಎಲ್.ಚಾಂದೇಲ್ ಅವರು, ಮಾಜಿ ಕೌನ್ಸಿಲರ್ ತನ್ನ ಪತ್ನಿಯ ಜೊತೆಗೆ ಕೌಟುಂಬಿಕ ಸಮಸ್ಯೆ ಹೊಂದಿದ್ದ. ಪತ್ನಿಯ ಕಿರುಕುಳದಿಂದ ಬೇಸತ್ತ ಆರೋಪಿಯು ಇದೀಗ ತಲಾಖ್ ನೀಡಿದ್ದಾನೆ ಎಂದು ತಿಳಿಸಿದ್ದಾರೆ.

ತಲಾಖ್ ನೀಡಿದ ಆರೋಪಿಯು ಬಿಜೆಪಿ ಪಕ್ಷದ ಮಾಜಿ ಕೌನ್ಸಿಲರ್ ಆಗಿದ್ದು, ಆತನ ವಿರುದ್ಧ ಪ್ರಕರಣ ದಾಖಲು ಆಗಿದೆ ಎಂದು ಆರ್.ಎಲ್.ಚಾಂದೇಲ್ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೊದಲಿಗೆ ಡಿಸೆಂಬರ್ 2017ರಲ್ಲಿ ಸುಗ್ರೀವಾಜ್ಞೆ ಮೂಲಕ ತ್ರಿವಳಿ ತಲಾಖ್ ಕಾಯ್ದೆ ಜಾರಿ ಮಾಡಿತ್ತು. ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿದ್ದ 2 ಸಂದರ್ಭದಲ್ಲೂ ಕಾಯ್ದೆ ರಾಜ್ಯ ಸಭೆಯಲ್ಲಿ ಪಾಸ್ ಆಗಲು ವಿಫಲವಾಗಿತ್ತು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಮತ್ತೆ ಅಧಿಕಾರ ಪಡೆದ ಎನ್‍ಡಿಎ ಸರ್ಕಾರ 2019ರ ಜುಲೈನಲ್ಲಿ ಮಸೂದೆಯನ್ನು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪಾಸ್ ಮಾಡಿತ್ತು.

ಪರಿಷ್ಕೃತ ಕಾಯ್ದೆಯ ಪ್ರಕಾರ ತ್ರಿವಳಿ ತಲಾಖ್ ಕಾನೂನು ಬಾಹಿರ ಮತ್ತು ಜಾಮೀನು ರಹಿತ ಕ್ರಿಮಿನಲ್ ಅಪರಾಧವಾಗಿದೆ. ತಲಾಖ್ ನೀಡುವ ಮುಸ್ಲಿಂ ಪುರುಷರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

Comments are closed.