ಕರ್ನಾಟಕ

ಕಲಬುರಗಿಯಲ್ಲಿ ಸಿಎಎ, ಎನ್ಆರ್‌ಸಿ ವಿರುದ್ಧ ಬೃಹತ್ ಸಮಾವೇಶ

Pinterest LinkedIn Tumblr


ಕಲಬುರಗಿ: ಎಡಪಕ್ಷದ ಮುಖಂಡ ಸೀತಾರಾಂ ಯಚೂರಿ ಮಾತನಾಡಿ, ಕೇರಳ ಮತ್ತು ಪಂಜಾಬ್ ಮಾದರಿಯಲ್ಲಿ ದೇಶದ ಎಲ್ಲ ರಾಜ್ಯ ಸರಕಾರಗಳು ಸಿಎಎ, ಎನ್.ಆರ್.ಸಿ ಮತ್ತು ಎನ್‌.ಪಿ.ಆರ್ ವಿರುದ್ಧ ನಿರ್ಣಯ ಕೈಗೊಂಡು ದೇಶದ ಸಂವಿಧಾನ ರಕ್ಷಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಕರ್ನಾಟಕ ಪೀಪಲ್ಸ್ ಪೋರಂ ಆಶ್ರಯದಲ್ಲಿ ಕಲಬುರಗಿಯ ಹಾಗರಗಾ ರಸ್ತೆಯ ಪೀರ್ ಬಂಗಾಲಿ ಮೈದಾನದಲ್ಲಿ ಸಿಎಎ, ಎನ್ಆರ್ಪಿ ಮತ್ತು ಎನ್.ಆರ್.ಸಿ ವಿರುದ್ಧ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಇಂದು ದೇಶದಲ್ಲಿ ನಾಗರಿಕ ಅಸಹಕಾರ ಚಳವಳಿ ಆರಂಭಗೊಂಡಿದೆ. ಮೋದಿ-ಶಾ ಸಾವಧಾನ್, ಹಮ್ ಬಚಾಯೇಂಗೆ ಸಂವಿಧಾನ್ ಎಂದರು.

ಪ್ರಧಾನಿ ನರೇಂದ್ರ ಮೋದಿ ತಮ್ಮ ಡಿಗ್ರಿ, ಪರಿವಾರದ ಬಗ್ಗೆ ಸಾಕಷ್ಟು ಸುಳ್ಳು ಹೇಳಿದ್ದಾರೆ. ಈಗ ಅನಗತ್ಯ ಕಾಯ್ದೆಗಳ ಮೂಲಕ ದೇಶದ ಜನರಿಗೆ ಸುಳ್ಳು ಹೇಳುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸಿಎಎ, ಎನ್.ಆರ್.ಸಿ ಮತ್ತು ಎನ್.ಪಿ.ಆರ್ ನೆಪದಲ್ಲಿ ಮುಸ್ಲಿಮರನ್ನು ಪ್ರತ್ಯೇಕಿಸಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.

ಪುಣೆಯ ಪ್ರೊ.ಸುಷ್ಮಾ ಕಂದಾರೆ ಮಾತನಾಡಿ, ಗುಜರಾತಿನಿಂದ ಗಡಿಪಾರು ಆಗಿದ್ದ ಗೂಂಡಾ ಮತ್ತು ಗೋಧ್ರಾ ಹಂತಕ ಈ ದೇಶದ ಜನರಿಗೆ ಕಾನೂನು ಪಾಠ ಮಾಡಲು ಹೊರಟಿದ್ದಾರೆ. ಇಷ್ಟಕ್ಕೂ ಈ ದೇಶಕ್ಕೆ ಕಾನೂನು ಹೇಳಿಕೊಡುವ ಕೆಲಸವನ್ನು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಮಾಡಿದ್ದಾರೆ ಎಂದರು.

ಇದೇವೇಳೆ, ಮಾಧ್ಯಮಗಳ ವಿರುದ್ಧ ಹರಿಹಾಯ್ದ ಸುಷ್ಮಾ, ಅಣ್ಣಾ ಹಜಾರೆ ಚಳವಳಿ ನಡೆಸುವಾಗ ಅಣ್ಣಾ ಕಣ್ಣು ಬಿಟ್ಟರು ಅಣ್ಣಾ ಎದ್ದು ಕುಳಿತರು, ಅಣ್ಣಾ ಆಕಳಿಸಿದರು ಎಂದೆಲ್ಲಾ ಸುದ್ದಿ ಮಾಡುವ ಮಾಧ್ಯಮಗಳು ಸಿಎಎ ವಿರುದ್ಧ ನಡೆಯುತ್ತಿರುವ ಹೋರಾಟಗಳನ್ನು ಸರಿಯಾಗಿ ಬಿಂಬಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ದೇಶದಲ್ಲಿ ಆಭಿವೃದ್ಧಿ ಕಾರ್ಯಗಳನ್ನು ಮಾಡಲಾಗದ ಕಾರಣ ದೇಶ ಎಲ್ಲ ರಂಗಗಳಲ್ಲಿ ಕುಸಿಯುತ್ತಿದೆ. ಹೀಗಾಗಿ ತಮ್ಮ ತಪ್ಪುಗಳನ್ನು ಮುಚ್ಷಿಕೊಳ್ಳಲು ಮೋದಿ ಹಾಗೂ ಶಾ ಜೋಡಿ ಅನಗತ್ಯ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ ಎಂದರು.

ಶಾಸಕ ಅಜಯ್ ಸಿಂಗ್ ಮಾತನಾಡಿ, ದೇಶದ ಜಿಡಿಪಿ 4.5 ಇದ್ದರೆ ಪಾಕಿಸ್ತಾನದ ಜಿಡಿಪಿ 7.8 ಜಿಡಿಪಿ ಇದೆ. ನಮಗಿಂತಲೂ ಬಾಂಗ್ಲಾ ಮತ್ತು ನೇಪಾಳದ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಈ ನಿಟ್ಟಿನಲ್ಲಿ ಸಕಾರಾತ್ಮಕ ಕೆಲಸಗಳನ್ನು ಮಾಡದೆ ಇಲ್ಲದ ಕಾಯ್ದೆಗಳನ್ನು ಜಾರಿಗೆ ತರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಸಚಿವರಾದ ಸಿ.ಎಂ.ಇಬ್ರಾಹಿಂ, ಪ್ರಿಯಾಂಕ್ ಖರ್ಗೆ, ಬಂಡೆಪ್ಪ ಕಾಶೆಂಪುರ, ಸ್ವಾಮಿ ಅಗ್ನಿವೇಶ ಸೇರಿದಂತೆ ಇತರರು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.

Comments are closed.