ಕರ್ನಾಟಕ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಚುನಾವಣೆಗೆ ನಿಲ್ಲಲ್ಲ: ಕಲ್ಲಡ್ಕ ಪ್ರಭಾಕರ್‌ ಭಟ್

Pinterest LinkedIn Tumblr


ಚಿಕ್ಕಬಳ್ಳಾಪುರ: ಮುಂದಿನ ಮೂರುವರೆ ವರ್ಷದ ಕಾಲ ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸಲಿರುವ ಬಿ.ಎಸ್‌.ಯಡಿಯೂರಪ್ಪ ಬಳಿಕ ಚುನಾವಣೆಗಳಿಂದ ದೂರ ಉಳಿದು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಕಾರ್ಯಕಾರಣಿ ಸದಸ್ಯ ಕಲ್ಲಡ್ಕ ಪ್ರಭಾಕರ್‌ ಭಟ್ಟರು ತಿಳಿಸಿದರು.

ಚಿಕ್ಕಬಳ್ಳಾಪುರ ನಗರದ ಶ್ರೀ ದೇವಿ ಪ್ಯಾಲೇಸ್‌ನಲ್ಲಿ ಭಾನುವಾರ
ಸ್ಥಳೀಯ ಗಾಯಿತ್ರಿ ಸೇವಾ ಸಮಿತಿ ಹಾಗೂ ಗಾಯಿತ್ರಿ ಮಹಿಳಾ ಮಂಡಳಿ ಹಮ್ಮಿಕೊಂಡಿದ್ದ ಶ್ರೀ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ತಮ್ಮನ್ನು ಬೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ತಿಂಗಳ ಹಿಂದೆ ನಾನು ಅವರನ್ನು ಬೇಟಿಯಾಗಿದ್ದೆ. ಅವರೇ ಸಂತೋಷದಿಂದ ನನಗೆ ಹೇಳಿದ ಮಾತು ಇದು. ನಾನು ಮೂರುವರೆ ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ ರೈತರ, ರ್ದುಬಲ ವರ್ಗಗಳ ಅಭಿವೃದ್ದಿಗೆ ಚೆನ್ನಾಗಿ ಕೆಲಸ ಮಾಡುತ್ತೇನೆ. ಮತ್ತೆ ನಾನು ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಪಕ್ಷ ಹಾಗೂ ಜನ ನನಗೆ ಎಲ್ಲ ರೀತಿಯ ಜವಾಬ್ದಾರಿ ಹಾಗೂ ಅಧಿಕಾರ ನೀಡಿದ್ದಾರೆ.

ಆದ್ದರಿಂದ ಪಕ್ಷಕ್ಕೋಸ್ಕರ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಖುದ್ದು ನನ್ನ ಜೊತೆಗೆ ಹೇಳಿದ್ದಾರೆಂದು ಕಲ್ಲಡ್ಕ ಪ್ರಭಾಕರ್‌ ತಿಳಿಸಿದರು.

ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ, ಇನ್ನೂ ಮುಂದಿನ ಮೂವರೆ ವರ್ಷದ ಕಾಲ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿಯೆ ಸರ್ಕಾರ ನಡೆಯಲಿದೆ. ಯಾರು ಈ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು. ಯಡಿಯೂರಪ್ಪಗೆ ಜನರ ಬಗ್ಗೆ ದುಃಖೀತರಿಗೆ ಏನಾದರೂ ಗೌರವದಿಂದ ಮಾಡಬೇಕೆಂಬ ದೃಷ್ಠಿಯನ್ನು ಹೊಂದಿರುವ ವ್ಯಕ್ತಿ. ಮಣ್ಣಿನ ಮಗ, ರೈತನ ಮಗ ಎಂದ ಪ್ರಭಾಕರ್‌, ಇಡೀ ದೇಶದಲ್ಲಿ ರೈತರ ಬಜೆಟ್‌ ತಂದವರು ಯಾರದರೂ ಇದ್ದರೆ ಅದು ಯಡಿಯೂರಪ್ಪ ಮಾತ್ರ. ಕಳೆದ 60 ವರ್ಷದಲ್ಲಿ ಯಾರು ಮಾಡದ ಕೆಲಸವನ್ನು ಯಡಿಯೂರಪ್ಪ ರೈತರ ಪರವಾಗಿ ಬಜೆಟ್‌ ಮಾಡಿದರು. ಆದ್ದರಿಂದ ಅವರು ರೈತರ ಬಗ್ಗೆ ಇರುವ ಅನುಭವಿ ರಾಜಕಾರಣಿ, ಕಳೆದ 42 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿ ಬಂದ ವ್ಯಕ್ತಿ ಅವರು, ಇವತ್ತು ಯಾವುದೋ ಜಾತಿ, ಹಣದ ಆಧಾರದ ಮೇಲೆ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿದೆ ಎನ್ನುವುದು ತಪ್ಪು, ಅವರು ಸತತವಾಗಿ ನಡೆಸಿಕೊಂಡು ಬಂದ ಹೋರಾಟದಿಂದ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಶೂನ್ಯದಿಂದ ಕಟ್ಟಿದ್ದಾರೆ. ಹೋರಾಟಗಳ ಮುಖಾಂತರವೇ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆಂದರು.

Comments are closed.