ಕರ್ನಾಟಕ

ಕೆಎಂಎಫ್​ ಹಾಲಿನ ದರ ಪ್ರತಿ ಲೀಟರಿಗೆ 2ರಿಂದ 3ರೂ ಹೆಚ್ಚಿಸುವ ಸಾಧ್ಯತೆ !

Pinterest LinkedIn Tumblr

ಬೆಂಗಳೂರು: ಸಂಕ್ರಾಂತಿಯ ಸಂಭ್ರಮದಲ್ಲಿಯೇ ಹಾಲಿನ ದರ ಹೆಚ್ಚಳ ಮಾಡಿ, ಗ್ರಾಹಕರಿಗೆ ಶಾಕ್​ ನೀಡಲು ಕರ್ನಾಟಕ ಹಾಲು ಮಂಡಳಿ ಮುಂದಾಗಿದೆ. ಪ್ರತಿ ಲೀಗೆ 2 ರಿಂದ 3ರೂ ಹಾಲಿನ ದರ ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದ್ದು, ಈ ಬಗ್ಗೆ ನಾಳೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ.

ಈ ಕುರಿತು ಇಂದು ಮಾತನಾಡಿದ ಕೆಎಂಎಫ್​ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, 14 ಹಾಲು ಒಕ್ಕೂಟಗಳ ವತಿಯಿಂದ ಹಾಲಿನ ದರ ಹೆಚ್ಚಳಕ್ಕಾಗಿ ಕೆಎಂಎಫ್ ಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಪ್ರತೀ ಲೀಟರ್ ಗೆ ಎರಡರಿಂದ ಮೂರು ರೂ ಹೆಚ್ಚಳ ಮಾಡುವಂತೆ ಬೇಡಿಕೆ ಬಂದಿದೆ. ಆದರೆ, ಈ ಬಗ್ಗೆ ಅಂತಿಮ ತೀರ್ಮಾನವಾಗಿಲ್ಲ. ನಾಳೆ ಹಾಲಿನ ದರ ಹೆಚ್ಚಳ ಸಂಬಂಧ ಸಭೆ ನಡೆಸಲಾಗುವುದು. ಈ ಆಡಳಿತ ಮಂಡಳಿ ಸಭೆಯಲ್ಲಿ ಸಾದಕ-ಬಾದಕಗಳ ಚರ್ಚೆ ನಡೆಸಿ, ಅಂತಿಮ ತೀರ್ಮಾನ ಕೈ ಗೊಳ್ಳಲಾಗುವುದು ಎಂದರು.

6 ರೂ ಸಹಾಯಧನಕ್ಕೆ ಮನವಿ:
ಇದಕ್ಕೂ ಮುನ್ನ ಕೆಎಂಎಫ್​ನಲ್ಲಿ ನಂದಿನಿ ನೂತನ ಉತ್ಪನ್ನಗಳನ್ನು ಸಿಎಂ ಬಿಎಸ್​ ಯಡಿಯೂರಪ್ಪ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ಯಡಿಯೂರಪ್ಪ ಅವರು ಮೊದಲು ಸಿಎಂ ಆದಾಗ ರೈತರ ಹಾಲಿಗೆ 2 ರೂ ಸಹಾಯಧನ ನೀಡಿದ್ದರು. ಈಗ 5 ರೂಪಾಯಿ ಆಗಿದೆ. ಅದಕ್ಕೆ ಕಾರಣ ಯಡಿಯೂರಪ್ಪ ಅವರ ರೈತರ ಪರ ಕಾಳಜಿಯುಳ್ಳವರು ಎನ್ನುವುದು. ಈಗ 5 ರೂಪಾಯಿ ಸಹಾಯಧನ ವನ್ನು 6 ರೂಪಾಯಿಗೆ ಹೆಚ್ಚಿಸುವಂತೆ ಮನವಿ ಸಲ್ಲಿಸಿದ್ದೇವೆ. ಈ ಬಾರಿಯ ಬಜೆಟ್ ನಲ್ಲಿ ಸಹಾಯಧನ ಹೆಚ್ಚಳ ಮಾಡಿದರೆ, ರೈತರಿಗೆ ಸಹಾಯವಾಗಲಿದೆ ಎಂದು ಮನವಿ ಮಾಡಿದರು.

ದೇಸಿ ತಳಿ ಅಭಿವೃದ್ಧಿಗೆ ಕ್ರಮ
ಕೆಎಂಎಫ್ ಗುಜರಾತ್ ನ ಅಮೂಲ್ ನಂತರ ಎರಡನೇ ಸ್ಥಾನದಲ್ಲಿದೆ. ಕೆಎಂಎಫ್ ನಿಂದ ನಿತ್ಯ 84.43 ಲಕ್ಷ‌ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದೆ. ನಿತ್ಯ 24 ಕೋಟಿಗೂ ಹೆಚ್ಚು ವಹಿವಾಟು ಮಾಡಲಾಗುತ್ತಿದ್ದು, ಶೇ.80 ಕ್ಕಿಂತ ಹೆಚ್ಚು ರೈತರಿಂದ ಹಾಲು ಪೂರೈಕೆಯಾಗುತ್ತಿದೆ. ಹಾಲು ಉತ್ಪಾದನೆ ಹೆಚ್ಚಳಕ್ಕೆ ದೇಸೀ ತಳಿಗಳ ಅಭಿವೃದ್ಧಿಗೆ ಕ್ರಮಕ್ಕೆ ಮುಂದಾಗಿದ್ದು. ದೇಸೀ ತಳಿ ಹಾಲು ಶೇಖರಣೆ ಮತ್ತು ಮಾರಾಟ ಯಶಸ್ವಿಯಾಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಳಿಯ ಶಾಹಿವಾಲ್ ಹಸುಗಳಿಂದ ಶೇಖರಿಸಿದ ಹಾಲನ್ನು ಪ್ರತ್ಯೇಕವಾಗಿ ಸಂಸ್ಕರಿಸಿ 500ಮಿ.ಲಿ ಪ್ಯಾಕ್ ಮಾಡಲಾಗುತ್ತದೆ. ಇದರಲ್ಲಿ ಎ- 2 ಮಾದರಿಯ ಬೀಟಾ ಕೇಸಿನ್ ಪೋಷಾಕಾಂಶ ಇರುತ್ತದೆ. ಇದರಲ್ಲಿ ರೋಗನಿರೋಧಕ ಶಕ್ತಿ ಇರುತ್ತದೆ. ಇದು ಕ್ಯಾಲ್ಸಿಯಂ ಕೊರತೆ ಕಡಿಮೆ ಮಾಡುತ್ತದೆ. 1ಲೀ ಟೆಟ್ರಾ ಪ್ಯಾಕ್ ನಲ್ಲಿ 120ದಿನ ಇಡಬಹುದಾಗಿದೆ. ಯಾವುದೇ ರೆಫ್ರಿಜರೇಟರ್ ಇಲ್ಲದೇ ಶೇಖರಿಸಿಡಬಹುದು. ಈ ಹಾಲಿನ ಕ್ರೀಂ ಅನ್ನು ಬೇಕರಿ ಖಾದ್ಯಗಳಿಗೆ ಬಳಸಬಹುದು. ದೇಶಿ ಹಾಲು ಇವತ್ತಿಂದ ಮಾರುಕಟ್ಟೆಯಲ್ಲಿ ದೊರಯಲಿದೆ. ಪ್ರತಿ ಲೀಟರ್ ಹಾಲಿಗೆ 75ರೂ ಇದೆ ಎಂದು ವಿವರಣೆ ನೀಡಿದರು.

Comments are closed.