ಕರ್ನಾಟಕ

ಸಿನಿಮಾ ಹಾಡೊಂದಕ್ಕೆ ಶಾಲೆಯಲ್ಲಿ ಸೊಂಟ ಅಲ್ಲಾಡ್ಸಿದ ಶಿಕ್ಷಕಿಯರು, ಸಚಿವರಿಂದ ನೋಟಿಸ್

Pinterest LinkedIn Tumblr


ಬೆಂಗಳೂರು: ಸರಕಾರಿ ಶಾಲೆಯ ವೇದಿಕೆಯಲ್ಲಿ ಪದ್ಯವೊಂದಕ್ಕೆ ಶಿಕ್ಷಕಿಯರು ಡಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇದನ್ನು ‘ಅಸಭ್ಯ’ ನೃತ್ಯ ಎಂದು ಪರಿಗಣಿಸಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆಯಂತೆ ಶಾಲೆಗೆ ನೋಟಿಸ್‌ ಜಾರಿಗೊಳಿಸಲಾಗಿದೆ.

ಬೆಂಗಳೂರಿನ ಹೊರವಲಯದ ಶಾಲೆಯೊಂದರಲ್ಲಿ ನಡೆಯ ಕಾರ್ಯಕ್ರಮವೊಂದಲ್ಲಿ ‘ಅಲ್ಲಾಡ್ಸು’ ಪದ್ಯವೊಂದಕ್ಕೆ ಶಿಕ್ಷಕಿಯರ ತಂಡ ವೇದಿಕೆಯಲ್ಲಿ ನೃತ್ಯ ಮಾಡಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು ವೈರಲ್ ಆಗಿತ್ತು.

ಶಾಲಾ ಶಿಕ್ಷಕಿಯರು ಈ ಪದ್ಯಕ್ಕೆ ನೃತ್ಯ ಮಾಡಿದ್ಕಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಈ ವಿಡಿಯೋ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಗಮನಕ್ಕೂ ಬಂದಿದ್ದು ವಿವರಣೆ ನೀಡುವಂತೆ ಸಚಿವರು ಶಾಲೆಗೆ ನೋಟಿಸ್‌ ಜಾರಿಗೊಳಿಸಿದ್ದಾರೆ.

ಈ ಕುರಿತಾಗಿ ಮಾತನಾಡಿದ ಸುರೇಶ್ ಕುಮಾರ್, ಬೆಂಗಳೂರು ದಕ್ಷಿಣ ಜಿಲ್ಲೆಯ ಶಾಲೆಯೊಂದರ ಆವರಣದಲ್ಲಿ ನಡೆದಿರುವ ಅಸಭ್ಯ ನೃತ್ಯ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಂತಹ ವರ್ತನೆಯಿಂದ ನಮ್ಮ ಶಿಕ್ಷಕರ ಹಾಗೂ ಶಾಲೆಗಳ ಬಗ್ಗೆ ಸಹಜವಾಗಿ ಎಲ್ಲರಿಗೂ ಬೇಸರ ಉಂಟಾಗಿದೆ. ಈಗಾಗಲೇ ಸಂಬಂಧ ಪಟ್ಟ ಶಾಲೆಗೆ ನೋಟೀಸ್ ಕೊಡಲಾಗಿದೆ ಎಂದಿದ್ದಾರೆ.

ಇದೇ ವೇಳೆ ಶಿಕ್ಷಕರಿಗೆ ಕಿವಿಮಾತು ಹೇಳಿದ ಸುರೇಶ್ ಕುಮಾರ್, ನಾಡಿನ ಶಿಕ್ಷಕರ ನಡೆ ನುಡಿಗಳು ಶಾಲೆ ಹಾಗೂ ಅವರ ವೃತ್ತಿಯ ಗೌರವ ಹೆಚ್ಚಿಸುವಂತೆ ಇರಬೇಕು. ಕೆಟ್ಟ ಹವ್ಯಾಸಗಳ ಪ್ರದರ್ಶನ ಮಾಡಿದರೆ ಶಾಲೆಯಲ್ಲಿ ಮಕ್ಕಳು ಶಿಕ್ಷಕರ ಬಗ್ಗೆ ಯಾವ ರೀತಿಯಲ್ಲಿ ಮಾತನಾಡಬಹುದು ಎಂದು ಪ್ರಶ್ನಿಸಿದ್ದಾರೆ.

ಕೆಲ ದಿನಗಳ ಹಿಂದೆ ಶಿಕ್ಷಕರೊಬ್ಬರು ಬಾಲಕನಿಗೆ ಪಕ್ಕೆಲುಬು ಉಚ್ಚಾರ ಮಾಡಿಸುವ ವಿಡಿಯೋ ಒಂದು ವೈರಲ್ ಆಗಿತ್ತು. ಶಿಕ್ಷಕರ ನಡೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ ಶಿಕ್ಷಕರನ್ನು ಸಚಿವ ಸುರೇಶ್ ಕುಮಾರ್ ಸೂಚನೆಯಂತೆ ಅಮಾನತು ಮಾಡಲಾಗಿದೆ. ಸಚಿವರ ಈ ನಿರ್ಧಾರ ಪ್ರಶಂಸೆಗೂ ಪಾತ್ರವಾಗಿದೆ.

ಶಿಕ್ಷಕಿಯರು ನೃತ್ಯ ಮಾಡೋದರಲ್ಲಿ ತಪ್ಪೇನಿದೆ ?

ಶಾಲಾ ಶಿಕ್ಷಕಿಯರ ಗುಂಪು ಸಿನಿಮಾ ಹಾಡೊಂದಕ್ಕೆ ವೇದಿಕೆಯಲ್ಲಿ ನೃತ್ಯ ಮಾಡುವುದಕ್ಕೆ ನೋಟಿಸ್‌ ಜಾರಿಗೊಳಿಸಿದ ಸಚಿವ ಸುರೇಶ್ ಕುಮಾರ್ ನಡೆ ಎರಡು ಆಯಾಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಶಿಕ್ಷಕಿಯರ ನೃತ್ಯ ಪ್ರದರ್ಶನವನ್ನು ತಪ್ಪು ಎಂದರೆ ಮತ್ತೆ ಕೆಲವರು ನೃತ್ಯ ಮಾಡುವುದು ಅಶ್ಲೀಲ ಹೇಗಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಸಿನಿಮಾ ಪದ್ಯವೊಂದಕ್ಕೆ ಶಿಕ್ಷಕಿಯರು ನೃತ್ಯ ಮಾಡಿದ್ದಾರೆ ಹೊರತಾಗಿ ಇದು ಅಶ್ಲೀಲ ಪ್ರದರ್ಶನವಲ್ಲ ಇಷ್ಟಕ್ಕೆ ನೋಟಿಸ್‌ ಜಾರಿಗೊಳಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

Comments are closed.