ಕರ್ನಾಟಕ

ಹೈಸ್ಕೂಲ್‌ ದಿನಗಳಲ್ಲಿ ತರಕಾರಿ, ನಿಂಬೆ ಹಣ್ಣು ಮಾರುತ್ತಿದ್ದೆ- ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು: ಹೈಸ್ಕೂಲ್ ಓದುತ್ತಿರುವ ದಿನಗಳಲ್ಲಿ ತರಕಾರಿ ನಿಂಬೆ ಹಣ್ಣು ಮಾರಾಟ ಮಾಡುತ್ತಿದ್ದೆ ಎಂದು ತನ್ನ ಬಾಲ್ಯದ ದಿನಗಳನ್ನು ಸಿಎಂ ಬಿ.ಎಸ್‌ ಯಡಿಯೂರಪ್ಪ ಮೆಲುಕು ಹಾಕಿಕೊಂಡರು.

ಬೆಂಗಳೂರಿನಲ್ಲಿ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಮಂಡ್ಯ ಜಿಲ್ಲೆಯ ಬೂಕನಕೆರೆಯ ಹಳ್ಳಿಯಲ್ಲಿ ಶಾಲೆಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಕುಟುಂಬದಲ್ಲಿ ಬಡತನವಿದ್ದ ಕಾರಣಕ್ಕಾಗಿ ತರಕಾರಿ, ನಿಂಬೆ ಹಣ್ಣು ಮಾರಾಟ ಮಾಡುತ್ತಾ ಜೀವನ ಮಾಡುತ್ತಿದ್ದೆ ಎಂದು ನೆನೆಸಿಕೊಂಡರು.

ಬಾಲ್ಯದ ದಿನಗಳಲ್ಲಿ ಬಡತನ ಇದ್ದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿರಿಯರ ಮಾರ್ಗದರ್ಶನದಿಂದ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು . ಬಡತನದ ಹಿನ್ನೆಲೆಯಿಂದ ಬಂದರೂ ರಾಜ್ಯದ ಜನರ ಆಶೀರ್ವಾದದಿಂದ ನಾಲ್ಕು ಬಾರಿ ಸಿಎಂ ಆಗಲು ಅವಕಾಶ ಸಿಕ್ಕಿದೆ ಎಂದರು.

ನಾನು ನಡೆದುಕೊಂಡು ಬಂದ ರೀತಿಗೆ ಹೆಮ್ಮೆ ಇದೆ. ನಮ್ಮ ಜೀವನದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಮಕ್ಕಳು ತಂದೆ ತಾಯಿಗಳಿಗೆ ಗೌರವ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಪೋಷಕರ ಆಸೆ ಆಕಾಂಕ್ಷೆಗಳನ್ನು ಪೂರೈಸಬೇಕು. ದುಡಿದು ನಮ್ಮ ಮನೆಯವರನ್ನು ಸಾಕುವ ಜೊತೆಗೆ ನಾವೂ ಕೂಡಾ ಸ್ವತಂತ್ರ್ಯರಾಗಿ ಬದುಕಬೇಕು ಎಂದು ಯುವಜನರಿಗೆ ಸಿಎಂ ಕಿವಿಮಾತನ್ನು ಹೇಳಿದರು.

ಬಿ.ಎಸ್‌ ಯಡಿಯೂರಪ್ಪನವರು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯ ಬೂಕನಕೆರೆ ಗ್ರಾಮದವರಾಗಿದ್ದಾರೆ. ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರೈಸಿದ ಅವರು , 1965ರಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಥಮ ದರ್ಜೆಯ ಗುಮಾಸ್ತರಾಗಿ ವೃತ್ತಿಜೀವನ ಆರಂಭಿಸಿದರು.

ನಂತರ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರಕ್ಕೆ ತೆರಳಿ ಅಕ್ಕಿ ಗಿರಣಿಯೊಂದರಲ್ಲಿ ಗುಮಾಸ್ತರಾಗಿ ಸೇರಿದರು.
ಬಿ.ಎಸ್.ವೈ ತಮ್ಮ ಕಾಲೇಜು ದಿನಗಳಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ( ಆರ್‌ಎಸ್‌ಎಸ್) ಸದಸ್ಯರಾಗಿದ್ದರು. 1970ರಲ್ಲಿ ರಾಷ್ಟ್ರೀಯ ಸ್ವಯಂಸೇವಾ ಸಂಘದ ಶಿಕಾರಿಪುರ ಘಟಕದ ಕಾರ್ಯವಾಹರಾಗಿ ನೇಮಕಗೊಳ್ಳುವ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿದರು.

Comments are closed.