ಕರ್ನಾಟಕ

ಇನ್ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ದೇವೇಗೌಡ

Pinterest LinkedIn Tumblr


ಬೆಂಗಳೂರು: ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧೆ ನಡೆಸುವುದಿಲ್ಲ. ನನ್ನ ಉದ್ಧೇಶ ಏನಿದ್ದರೂ ಪಕ್ಷ ಪಟ್ಟುವುದು ಹಾಗೂ ತಳಮಟ್ಟದಲ್ಲಿ ಪಕ್ಷದ ಬಲವರ್ಧನೆ ಮಾಡುವುದು ಎಂದು ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ದೇವೇಗೌಡರು, ತಮ್ಮ ಮುಂದಿನ ಚುನಾವಣಾ ಸ್ಪರ್ಧೆಯ ಕುರಿತಾಗಿ ಹೇಳಿಕೆ ನೀಡಿದ್ದು ಯಾವುದೇ ಕಾರಣಕ್ಕೂ ಸ್ಪರ್ಧೆ ನಡೆಸದೇ ಇರಲು ತೀರ್ಮಾನ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ದೇವೇಗೌಡರನ್ನು ರಾಜ್ಯಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಸಂದರ್ಭದಲ್ಲಿ ರಾಜ್ಯಸಭೆಗೆ ಹೋಗಲು ಆಸಕ್ತಿ ಇಲ್ಲ ಬದಲಾಗಿ ರಾಜ್ಯದಲ್ಲಿ ಜೆಡಿಎಸ್‌ ಪಕ್ಷವನ್ನು ಸಂಘಟನೆ ಮಾಡುವುದು ಹಾಗೂ ಬಲವರ್ಧನೆ ಮಾಡುವುದಷ್ಟೇ ನನ್ನ ಮುಂದಿರುವ ಉದ್ಧೇಶ ಎಂದಿದ್ದಾರೆ.

ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ನಡೆದ ಮಹಿಳಾ ಪದಾಧಿಕಾರಿಗಳ ಸಭೆಯಲ್ಲಿ ದೇವೇಗೌಡರನ್ನು ರಾಜ್ಯಸಭೆಗೆ ಆಯ್ಕೆ ಮಾಡಬೇಕು ಎಂಬ ಬೇಡಿಕೆ ಬಂದಾಗಲೂ ನನಗೆ ಆಸಕ್ತಿ ಇಲ್ಲ ಎಂಬುವುದನ್ನು ದೇವಗೇಗೌಡರು ಸ್ಪಷ್ಟಪಡಿಸಿದ್ದರು.

ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಪ್ರಬಲವಾಗಿ ಕಟ್ಟುವುದು ನನಗೆ ಗೊತ್ತಿದೆ. ಲೋಕಸಭಾ ಚುನಾವಣೆ ಹಾಗೂ ಉಪಚುನಾವಣೆಯಲ್ಲಿ ಸೋಲಿನ ಕುರಿತಾಗಿ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಇಲ್ಲೇ ಇದ್ದು ಪಕ್ಷವನ್ನು ಮತ್ತಷ್ಟು ವ್ಯವಸ್ಥಿತವಾಗಿ ಸಂಘಟನೆ ಮಾಡುವುದು ನನ್ನ ಗುರಿ ಎಂದಿದ್ದರು..

ಇಂತಹ ಸಂದರ್ಭದಲ್ಲಿ ರಾಜ್ಯಸಭೆಗೆ ಹೋದರೆ ಜನರು ಅಧಿಕಾರ ದಾಹ ಎನ್ನುತ್ತಾರೆ. ಈ ನಿಟ್ಟಿನಲ್ಲಿ ಇಲ್ಲೇ ಇದ್ದು ಹೋರಾಟ ಮುಂದುವರಿಸುತ್ತೇನೆ ಎಂದು ಹೇಳಿದ್ದರು. ಇದೀಗ ಯಾವುದೇ ಚುನಾವಣೆಗೂ ಸ್ಪರ್ಧೆ ಮಾಡುವುದಿಲ್ಲ ಎನ್ನುವ ಮೂಲಕ ಚುನಾವಣಾ ರಾಜಕೀಯದ ಹಿಂದೆ ಸರಿಯುವ ಸೂಚನೆ ನೀಡಿದ್ದಾರೆ.

Comments are closed.