ಕರ್ನಾಟಕ

ಖ್ಯಾತ ಹಿರಿಯ ಸಾಹಿತಿ, ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ನಿಧನ

Pinterest LinkedIn Tumblr

ಬೆಂಗಳೂರು: ಕನ್ನಡ ನಾಡಿನ ಖ್ಯಾತ ಹಿರಿಯ ಸಾಹಿತಿ, ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಶನಿವಾರ ಬೆಳಗ್ಗೆ 4 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 88 ವರ್ಷವಾಗಿತ್ತು.

ಹಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ನ್ಯುಮೋನಿಯಾ ಬಂದು ಉಸಿರಾಟದ ಸಮಸ್ಯೆಯಿಂದ ಮೊನ್ನೆ 9ರಂದು ಆಸ್ಪತ್ರೆಗೆ ಸೇರಿದ್ದರು. ಶ್ವಾಸಕೋಶದ ಸೋಂಕು ನಿಯಂತ್ರಣಕ್ಕೆ ಬಾರದೆ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಅವರು ಮಗ ವಿನಯ್ ಕುಮಾರ್, ಮಗಳು ಶೋಭಾ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಕನ್ನಡ ಸಾಹಿತ್ಯದ ಬೆಳವಣಿಗೆ, ಹಂಪಿ ಸ್ಮಾರಕಗಳ ಸಂರಕ್ಷಣೆಗೆ ಕನ್ನಡ ನೆಲ-ಜಲ ರಕ್ಷಣೆಗೆ ನಿರಂತರವಾಗಿ ಹೋರಾಟ ನ ಡೆಸಿಕೊಂಡು ಬಂದಿದ್ದ ಚಿಮೂ ಅವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ಉಂಟಾದ ತುಂಬಲಾರದ ನಷ್ಟವಂತೂ ಹೌದು.

ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ದಕ್ಕಿಸಿಕೊಳ್ಳುವಲ್ಲಿ ಚಿದಾನಂದ ಮೂರ್ತಿ ಅವರ ಹೋರಾಟ ಮತ್ತು ಶ್ರಮ ಅಳಿಸಲಾಗದ್ದು.

ಅವರ ಮೃತದೇಹವನ್ನು ಸ್ವಗೃಹಕ್ಕೆ ತರಲಾಗಿದ್ದು, ಬೆಂಗಳೂರಿನ ವಿಜಯನಗರ ಸಮೀಪ ಹಂಪಿ ನಗರದ ಆರ್ ಪಿಸಿ ಲೇ ಔಟ್ ನಲ್ಲಿರುವ ಅವರ ನಿವಾಸದಲ್ಲಿ ಇಂದು ಸಾರ್ವಜನಿಕ ದರ್ಶನಕ್ಕೆ ಇಟ್ಟು ನಾಳೆ ಚಾಮರಾಜಪೇಟೆಯ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಇಂದು ಬೆಳಗ್ಗೆ ಸಚಿವ ವಿ.ಸೋಮಣ್ಣ ಸೇರಿದಂತೆ ವಿವಿಧ ಗಣ್ಯರು, ಸಾಹಿತಿಗಳು ಚಿಮೂ ಅವರ ನಿವಾಸಕ್ಕೆ ತೆರಳಿ ಹಿರಿಯ ಸಾಹಿತಿಯ ಅಂತಿಮ ದರ್ಶನ ಪಡೆದರು.

Comments are closed.