ಕರ್ನಾಟಕ

ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ‘ವೃಂದಾವನಸ್ತ’ರಾದ ಪೇಜಾವರ ಶ್ರೀ; ಅಶ್ರುತರ್ಪಣ ಅರ್ಪಿಸಿದ ಭಕ್ತಗಣ

Pinterest LinkedIn Tumblr

ಬೆಂಗಳೂರು: ಕೃಷ್ಣೈಕ್ಯರಾಗಿರುವ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಪಾರ್ಥೀವ ಶರೀರದ ವೃಂದಾವನ ಸಕಲ ಸರ್ಕಾರಿ ಗೌರವ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿದ್ಯಾಪೀಠದಲ್ಲಿ ರವಿವಾರ ನೆರವೇರಿತು.

ಉಡುಪಿಯಿಂದ ವಿಶೇಷ ವಿಮಾನದ ಮೂಲಕ ಬಂದ ಪಾರ್ಥೀವ ಶರೀರವನ್ನು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತರ ಸಂಜೆ 6-20ಕ್ಕೆ ನಗರದ ವಿದ್ಯಾಪೀಠಕ್ಕೆ ಅಂತ್ಯಸಂಸ್ಕಾರಕ್ಕಾಗಿ ತರಲಾಯಿತು.

ಬಳಿಕ ವಿದ್ಯಾಪೀಠ ಆವರಣದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರುಗಳಾದ ಕೆ.ಎಸ್. ಈಶ್ವರಪ್ಪ, ಆರ್. ಅಶೋಕ, ಬಸವರಾಜ್ ಬೊಮ್ಮಾಯಿ, ಸಂಸದರಾದ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ,ಕೇಂದ್ರದ ಮಾಜಿ ಸಚಿವೆ ಉಮಾಭಾರತಿ, ಸಿರಿಗೆರೆ ಮಠದ ಶ್ರೀ ಸೇರಿದಂತೆ ಅನೇಕರು ಅಂತಿಮ ನಮನ ಸಲ್ಲಿಸಿದರು.

ವಿಶ್ವೇಶ ತೀರ್ಥರ ಆಪ್ತ ಶಿಷ್ಯ ಮತ್ತು ವಿದ್ಯಾಪೀಠದ ಪ್ರಾಚಾರ್ಯ ಕೃಷ್ಣರಾಜ ಕುತ್ವಾಡಿ ಅವರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿಗಳೊಂದಿಗೆ ಶ್ರೀಗಳ ಪಾರ್ಥೀವ ಶರೀರವನ್ನು ಬೃಂದಾವನದೊಳಗೆ ಕುಳಿರಿಸಲಾಯಿತು.

ಬೃಂದಾವನ ವೇಳೆ ಶ್ರೀಗಳನ್ನು ಪದ್ಮಾಸನದಲ್ಲಿ ಕೂರಿಸಲಾಯಿತು. ಜಪ ಮಾಡುವ ಭಂಗಿಯಲ್ಲಿ ಗುಂಡಿಯಲ್ಲಿ ಕುಳಿರಿಸಿ ನಿತ್ಯ ಪೂಜೆಗೆ ಬಳಸುವ ಗಿಂಡಿ, ತುಳಸಿ ಮತ್ತಿತರ ಪೂಜಾ ಸಾಮಾಗ್ರಿ ಇಟ್ಟು ಅಂತಿಮ ವಿಧಾನ ವಿಧಿ ವಿಧಾನಗಳ ಪೂಜೆ ನೆರವೇರಿಸಲಾಯಿತು. ನಂತರ ಬ್ರಹ್ಮ ರಂದ್ರಗಳಲ್ಲಿ ತೆಂಗಿನ ಕಾಯಿ ಇಟ್ಟು, ಸಾಸಿವೆ, ಉಪ್ಪು, ಹತ್ತಿಯಲ್ಲಿ ಬೃಂದಾವನ ಮುಚ್ಚಲಾಯಿತು. ಬಳಿಕ ಪೂರ್ತಿ ಗುಂಡಿಯನ್ನು ಮಣ್ಣಿನಿಂದ ಮುಚ್ಚಲಾಯಿತು.

ಈ ಮಧ್ಯೆ ವಿದ್ಯಾಪೀಠದ ಹೊರಭಾಗದಲ್ಲಿ ಪಾಸ್ ಗಾಗಿ ಒಂದಿಷ್ಟು ನೂಕು ನುಗ್ಗಲು ಉಂಟಾಯಿತು. ವಿದ್ಯಾಪೀಠ ಸುತ್ತಮುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

Comments are closed.