ಕರ್ನಾಟಕ

ಮೀಟರ್ ಬಡ್ಡಿಕೋರರ ಕಿರುಕುಳ – ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

Pinterest LinkedIn Tumblr


ಕೋಲಾರ: ಮೀಟರ್ ಬಡ್ಡಿ, ಸಾಲಬಾಧೆ ಹಿನ್ನೆಲೆ ವಿಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಪುರಹಳ್ಳಿ ಗ್ರಾಮದ 40 ವರ್ಷದ ನಾಗೇಂದ್ರ ಬಾಬು ಆತ್ಮಹತ್ಯೆ ಮಾಡಿಕೊಂಡಿದ್ದು, ಒಂದು ವರ್ಷದ ಹಿಂದೆ ಮನೆ ಕಟ್ಟುವ ಸಮಯದಲ್ಲಿ ಮೀಟರ್ ಬಡ್ಡಿಗೆ ಸಾಲವನ್ನು ಪಡೆದಿದ್ದರು ಎನ್ನಲಾಗಿದೆ.

ಆತ್ಮಹತ್ಯೆಗೂ ಮುನ್ನ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿರುವ ನಾಗೇಂದ್ರ ಬಾಬು, ತಮ್ಮ ಸಾವಿಗೆ ಕಾರಣಗಳನ್ನು ತಿಳಿಸಿ ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆ ಕಟ್ಟುವ ಸಮಯದಲ್ಲಿ ಗ್ರಾಮದ ವೆಂಕಟೇಶ್(ಜಗ್ಗ), ಶ್ರೀರಾಮಪ್ಪ ಹಾಗೂ ಕೋಲಾರದ ನವೀನ್ ಕುಮಾರ್ ಬಳಿ ಸಾಲ ಪಡೆದಿದ್ದರು.

ಸಾಲದ ಬಡ್ಡಿ ಹಣ ನೀಡಲು ಎರಡು ದಿನ ತಡವಾದ ಹಿನ್ನೆಲೆ ಅವಾಚ್ಯ ಶಬ್ದಗಳಿಂದ ಬೈದು ಕಿರುಕುಳ ನೀಡಿ ಪ್ರಾಣ ಬೆದರಿಕೆ ಹಾಕುತ್ತಿದ್ದರು ಎಂದು ನಾಗೇಂದ್ರ ಬಾಬು ವಿಡಿಯೋದಲ್ಲಿ ಹೇಳಿದ್ದಾರೆ. ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಿಡಿಯೋ ಅಲ್ಲದೇ ಡೆತ್‍ನೋಟ್ ಕೂಡ ಬರೆದಿಟ್ಟಿದ್ದಾರೆ. ಮಂಗಳವಾರ ಮನೆಯ ಪಕ್ಕದ ತೋಟದಲ್ಲಿ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸದ್ಯ ಮೀಟರ್ ಬಡ್ಡಿ ನೀಡಿದವರ ವಿರುದ್ಧ ವೇಮಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೇಮಗಲ್ ಹೋಬಳಿಯಲ್ಲಿ ಮೀಟರ್ ಬಡ್ಡಿ ನೀಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಕೂಲಿ ಕಾರ್ಮಿಕರು, ಬಡವರು ಜೀವ ಕಳೆದುಕೊಳ್ಳುವ ಸ್ಥಿತಿ ಬಂದಿದ್ದು, ಮೀಟರ್ ಬಡ್ಡಿಗೆ ಸಾಲ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Comments are closed.