ಕರ್ನಾಟಕ

ನಟಿ ತಾರಾ, ಯುವ ನಟಿ ನಿಶ್ವಿಕಾರಿಂದ ಕ್ರಿಸ್ಮಸ್ ಆಚರಣೆ

Pinterest LinkedIn Tumblr


ಬೆಂಗಳೂರು: ಕ್ರಿಸ್ಮಸ್‍ಗೆ ಈಗಾಗಲೇ ಕೌಂಟ್ ಡೌನ್ ಆರಂಭಗೊಂಡಿದೆ. ಹಬ್ಬದ ಆಚರಣೆಗೆ ಸಿಲಿಕಾನ್ ಸಿಟಿ ಸಕಲ ರೀತಿಯಿಂದಲೂ ಸಜ್ಜುಗೊಂಡಿದ್ದು, ಕೆಲವೆಡೆ ಸೆಲೆಬ್ರೇಷನ್ ಸಹ ಮಾಡುತ್ತಿದ್ದಾರೆ. ಇಂದು ಕನ್ನಡ ಚಲನ ಚಿತ್ರರಂಗದ ನಟಿ ತಾರಾ ಅನುರಾಧ ಹಾಗೂ ಯುವ ನಟಿ ನಿಶ್ವಿಕಾ, ಕೊಳಗೇರಿಯ ಮಕ್ಕಳೊಂದಿಗೆ ಕ್ರಿಸ್ಮಸ್ ಆಚರಿಸಿದ್ರು.

ಭಾರತಿ ನಗರ ನಾಗರಿಕ ವೇದಿಕೆ ಕಾಕ್ಸ್ ಟೌನ್ ಗಂಗಮ್ಮ ದೇವಸ್ಥಾನದ ಆವರಣದಲ್ಲಿ, ನೂರಾರು ಸ್ಲಂ ಮಕ್ಕಳಿಗೆ ಕೇಕ್ ಮತ್ತು ಊಟ ವಿತರಿಸುವ ಮೂಲಕ ಕ್ರಿಸ್ಮಸ್ ಹಾಗೂ ಹೊಸ ವರ್ಷ 2020ನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಸಾಂತಾ ಕ್ಲಾಸ್ ವೇಷ ಧರಿಸಿದ ನೂರಾರು ಮಂದಿ ಮಕ್ಕಳೊಂದಿಗೆ ನಟಿ ಮಣಿಯರು ಮಕ್ಕಳಾದರು. ಈ ವೇಳೆ ಮಾತನಾಡಿದ ನಟಿ ತಾರಾ ಅನುರಾಧ, ಎಲ್ಲಾ ಧರ್ಮದ ಹಬ್ಬಗಳು ಪರಸ್ಪರ ಪ್ರೀತಿ, ಸೌಹಾರ್ದತೆಯ ಸಂದೇಶ ಸಾರುತ್ತವೆ. ಅದೇ ರೀತಿ ಕ್ರಿಸ್ಮಸ್ ಹಬ್ಬ ಪ್ರೀತಿಯ ಸಂಕೇತವಾಗಿದೆ ಎಂದರು.

ನಟಿ ನಿಶ್ವಿಕಾ ಮಾತನಾಡಿ, ಮಕ್ಕಳು ದೇವರ ಸಮ. ಮುದ್ದು ಮಕ್ಕಳೊಂದಿಗೆ ಕ್ರಿಸ್ಮಸ್ ಹಬ್ಬ ಆಚರಿಸುವುದೇ ಜೀವನದ ಸಂತಸದ ಕ್ಷಣವಾಗಿದೆ ಎಂದರು. ಈ ವೇಳೆ ಭಾರತಿ ನಗರ ನಾಗರಿಕ ವೇದಿಕೆ ಅಧ್ಯಕ್ಷ ಎನ್.ಎಸ್.ರವಿ ಹಾಜರಿದ್ದರು.

Comments are closed.