ಕರ್ನಾಟಕ

ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬೆಂಗಳೂರು ವಿವಿ ಪ್ರೊಫೆಸರ್; ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

Pinterest LinkedIn Tumblr

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಅನುವಾದಕರಾಗಿದ್ದ ಜಿ. ನಂಜುಂಡನ್ ಕೆಂಗೇರಿಯ ತಮ್ಮ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಬೆಂಗಳೂರು ವಿವಿಯಲ್ಲಿ ಸಾಂಖ್ಯಿಕ ಪ್ರಾಧ್ಯಾಪಕರಾಗಿದ್ದ ನಂಜುಂಡನ್ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಪಡೆದಿದ್ದ ನಂಜುಂಡನ್ ಅನುವಾದ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದವರು. ಯು.ಆರ್. ಅನಂತಮೂರ್ತಿ ಅವರ ಕೃತಿಗಳನ್ನು ತಮಿಳಿಗೆ ಅನುವಾದ ಮಾಡಿದ್ದ ನಂಜುಂಡನ್ ಕೆಂಗೇರಿಯ ನಾಗದೇವನಹಳ್ಳಿಯಲ್ಲಿ ವಾಸವಾಗಿದ್ದರು. ಅವರ ಪತ್ನಿ ತಮಿಳುನಾಡಿನಲ್ಲಿ ವಾಸವಾಗಿದ್ದರು.

ಕಳೆದ 4 ದಿನಗಳಿಂದ ನಂಜುಂಡನ್ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಪಾಠ ಮಾಡಲು ಹೋಗಿರಲಿಲ್ಲ. ಅವರಿಗೆ ಅನಾರೋಗ್ಯವಾಗಿರಬಹುದು ಎಂದು ವಿಶ್ವವಿದ್ಯಾಲಯದ ಸಾಂಖ್ಯಿಕ ವಿಭಾಗದ ಸಿಬ್ಬಂದಿ ನಂಜುಂಡನ್ ಅವರ ಮನೆಗೆ ಬಂದಿದ್ದರು. ಎಷ್ಟೇ ಬಾಗಿಲು ಬಡಿದರೂ ಬಾಗಿಲು ತೆಗೆಯದ ಕಾರಣ ತಮಿಳುನಾಡಿನಲ್ಲಿದ್ದ ನಂಜುಂಡನ್ ಪತ್ನಿಗೆ ವಿಷಯ ತಿಳಿಸಿದ್ದರು. ವಿಷಯ ತಿಳಿದ ಕೂಡಲೆ ತಮಿಳುನಾಡಿನಿಂದ ಹೊರಟುಬಂದ ಪತ್ನಿ ಬಾಗಿಲು ಬಡಿದು, ಫೋನ್ ಮಾಡಿದರೂ ಬಾಗಿಲು ತೆರೆಯದ ಕಾರಣ ಕೆಂಗೇರಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

ಶನಿವಾರ ಪೊಲೀಸರು ಬಂದು ಬಾಗಿಲು ಒಡೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ನಂಜುಂಡನ್ ಮೃತದೇಹ ಪತ್ತೆಯಾಗಿತ್ತು. ನಂಜುಂಡನ್ 4 ದಿನಗಳ ಹಿಂದೆಯೇ ಹೃದಯಾಘಾತದಿಂದ ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.