
ಹುಬ್ಬಳ್ಳಿ(ಡಿ.18): ಇಡೀ ದೇಶವೇ ವಿರೋಧ ವ್ಯಕ್ತಪಡಿಸುತ್ತಿರುವ ಪೌರತ್ವ ತಿದ್ದುಪಡಿ ಮಸೂದೆ ಕಾಯ್ದೆಯನ್ನು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸ್ವಾಗತಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಸ್ವಾಗತಾರ್ಹ. ಆದರೆ ಕಾಂಗ್ರೆಸ್‌ನವರು ರಾಜಕೀಯ ಲಾಭಕ್ಕಾಗಿ ಇದನ್ನು ವಿರೋಧಿಸುತ್ತಿದ್ದಾರೆ. ಕೈ ನೆರವಿನಿಂದ ಮುಸ್ಲಿಂರು ಪೌರತ್ವ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್ ಮುಸ್ಲಿಂರನ್ನು ಎತ್ತಿ ಕಟ್ಟುತ್ತಿದೆ ಎಂದು ಮುತಾಲಿಕ್ ಗಂಭೀರ ಆರೋಪ ಮಾಡಿದರು.
ಕಾಂಗ್ರೆಸ್ ಪಕ್ಷ ಕಳೆದ 50 ವರ್ಷಗಳಿಂದ ಮುಸ್ಲಿಂರನ್ನು ವೋಟ್ ಬ್ಯಾಂಕ್ ಮಾಡಿಕೊಂಡಿದೆ. ಅವರನ್ನು ಅಭಿವೃದ್ಧಿ ಮಾಡಿಲ್ಲ ಎಂದು ಟೀಕಿಸಿದರು. ಹೊಸ ಕಾಯ್ದೆಯಿಂದ ಭಾರತದ ಮುಸ್ಲಿಂರಿಗೆ ಯಾವುದೇ ತೊಂದರೆಯಿಲ್ಲ. ಅವರು ಇಲ್ಲಿನ ನಾಗರಿಕರೇ ಎಂದರು.
ಯು.ಟಿ. ಖಾದರ್ ಪೌರತ್ವ ಕಾಯ್ದೆ ಜಾರಿ ತಂದರೆ ರಾಜ್ಯಕ್ಕೆ ಬೆಂಕಿ ಹಚ್ಚುತ್ತೇನೆ ಎಂದು ಹೇಳಿದ್ದಾರೆ. ಖಾದರ್ ಒಬ್ಬ ಜವಾಬ್ದಾರಿಯುತ ಮನುಷ್ಯ. ಪಾಕಿಸ್ತಾನನದವರನ್ನು ಸೇರಿಸಿಕೊಳ್ಳಬೇಕಾ..? ಬೆಂಕಿ ಹಚ್ಚುತ್ತೇನೆಂದು ಹೇಳುವ ಖಾದರ್‌ರನ್ನು ಕೂಡಲೇ ಪೊಲೀಸರು ಬಂಧಿಸಬೇಕು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವರು ದೇಶ ದ್ರೋಹಿಗಳು ಎಂದು ಕಿಡಿಕಾರಿದರು.
ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಮಾಡಿದವರಿಗೆ ಸುಪ್ರೀಂ ಕೋರ್ಟ್ ಗಲ್ಲುಶಿಕ್ಷೆ ಖಾಯಂಗೊಳಿಸಿದ್ದು ಸ್ವಾಗತಾರ್ಹ. ಡಿಸೆಂಬರ್ 21ರಂದು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
Comments are closed.