
ನಾಗ್ಪುರ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಆಡಳಿತ ಪಕ್ಷ ಶಿವಸೇನೆ ಮತ್ತು ಮತ್ತು ಪ್ರತಿಪಕ್ಷ ಬಿಜೆಪಿಯ ಶಾಸಕರು ಕೊರಳ ಪಟ್ಟಿ ಹಿಡಿದು ಹೊಡೆದಾಡಿದ ಘಟನೆ ಮಂಗಳವಾರ ನಡೆದಿದೆ. ವಿಶೇಷವೆಂದರೆ ಈ ಪ್ರಕರಣ ನಡೆದದ್ದು ರೈತರಿಗೆ ಪರಿಹಾರ ನೀಡುವ ವಿಚಾರವಾಗಿ!
ಸದನದ ಕಲಾಪ ಆರಂಭವಾಗುತ್ತಲೇ ಎದ್ದುನಿಂತ ಬಿಜೆಪಿ ಶಾಸಕ ಅಭಿಮನ್ಯು ಪವಾರ್, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಎದುರು, ಶಿವಸೇನೆಯ ಮುಖವಾಣಿ “ಸಾಮ್ನಾ’ದಲ್ಲಿ ಪ್ರಕಟವಾಗಿದ್ದ ವರದಿಯೊಂದನ್ನು ಮುದ್ರಿಸಲಾಗಿದ್ದ ಬ್ಯಾನರ್ ಪ್ರದರ್ಶಿಸಲು ಮುಂದಾದರು. ಅತಿವೃಷ್ಟಿಯಿಂದ ನಷ್ಟ ಅನುಭವಿಸಿದ ರೈತರಿಗೆ ಹೆಕ್ಟೇರ್‌ಗೆ ತಲಾ 25,000 ರೂ. ಪರಿಹಾರ ನೀಡಬೇಕು ಎಂದು ಉದ್ಧವ್ ಆಗ್ರಹಿಸಿದ್ದ ವರದಿ ಅದಾಗಿತ್ತು. ಅವರೇ ಸಿಎಂ ಆಗಿರುವುದರಿಂದ ಆ ಬೇಡಿಕೆ ಜಾರಿಗೊಳಿಸಿ ಎಂದು ಬಿಜೆಪಿ ಶಾಸಕರು ಒತ್ತಾಯಿಸಿದರು. ಈ ವೇಳೆ ಸದನದ ಬಾವಿಗಿಳಿದ ಬಿಜೆಪಿಯ ಬಹುತೇಕ ಶಾಸಕರು ಮುಖ್ಯಮಂತ್ರಿ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದರು.
ಈ ನಡುವೆ ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್, ಅಭಿಮನ್ಯ ಪವಾರ್ ಕೈಯ್ಯಲ್ಲಿದ್ದ ಬ್ಯಾನರ್ ಕಿತ್ತುಕೊಳ್ಳಲು ಯತ್ನಿಸಿದರು. ಈ ವೇಳೆ ಇಬ್ಬರೂ ಪರಸ್ಪರ ಕೊರಳ ಪಟ್ಟಿ ಹಿಡಿದು ಹೊಡದಾಡಲು ಮುಂದಾದರು. ಪರಿಸ್ಥಿತಿ ಕೈಮೀರುವುದನ್ನು ಅರಿತು ಮಧ್ಯೆ ಪ್ರವೇಶಿಸಿದ ಸಚಿವರು ಹಾಗೂ ಮಾಜಿ ಸಚಿವರು ಇಬ್ಬರೂ ಶಾಸಕರನ್ನು ಸಮಾಧಾನ ಪಡಿಸಿದರು.
Comments are closed.