

ಬೆಂಗಳೂರು: ಉಪಚುನಾವಣೆಯಲ್ಲಿ ಗೆದ್ದ ನಾಯಕರಿಗಷ್ಟೇ ಸಚಿವ ಸ್ಥಾನವನ್ನು ನೀಡಲಾಗುತ್ತಿದ್ದು, ಪ್ರಸಕ್ತ ತಿಂಗಳಿನ ಕೊನೆಯ ವಾರದಲ್ಲಿ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ಸಂಪುಟ ವಿಸ್ತರಣೆ ಸಂಬಂಧ 21 ಅಥವಾ 22 ರಂದು ನವದೆಹಲಿಗೆ ತೆರಳುತ್ತೇನೆ. ತಿಂಗಳಾಂತ್ಯಕ್ಕೆ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ಮನವಿ ಮಾಡಿಕೊಳ್ಳುವುದು ಸ್ವಾಭಾವಿಕ. ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದವರಿಗೆ ಸಚಿವ ಸ್ಥಾನ ನೀಡಲಾಗುವುದು. ಇನ್ನುಳಿದವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಪಕ್ಷದ ಹೈಕಮಾಂಡ್ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನ ಸೇರಿದಂತೆ ಒಂಟ್ಟು 34 ಮಂದಿ ಸಚಿವರುಗಳಿದ್ದು, ಈಗಾಗಲೇ ಇದರಲ್ಲಿ 18 ಮದಿ ಸಚಿವರಾಗಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿಗಳು ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡುತ್ತಿದ್ದು, ಸಮಾಲೋಚನೆ ನಡೆಸುತ್ತಿದ್ದಾರೆ. ಶಾಸಕರಾದ ರಮೇಶ್ ಜಾರಕಿಹೊಳಿ, ಉಮೇಶ್ ಕತ್ತಿ, ನಾರಾಯಣಗೌಡ ಸೇರಿದಂತೆ ಹಲವು ಮುಖಂಡರು ಡಾಲರ್ಸ್ ಕಾಲೋನಿಯಲ್ಲಿನ ಮುಖ್ಯಮಂತ್ರಿಗಳ ನಿವಾಸಕ್ಕೆ ಮಂಗಳವಾರ ಆಗಮಿಸಿದ್ದು, ಈ ವೇಳೆ ಸಚಿವ ಸ್ಥಾನದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.
Comments are closed.