ರಾಷ್ಟ್ರೀಯ

ನಿರ್ಭಯಾ ಅತ್ಯಾಚಾರ ಪ್ರಕರಣ; ಗಲ್ಲು ಶಿಕ್ಷೆ ಖಾಯಂಗೊಳಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Pinterest LinkedIn Tumblr

ನವದೆಹಲಿ: 2012ರಲ್ಲಿ ನಡೆದ ನಿರ್ಭಯಾ ಹತ್ಯಾಚಾರ ಕೇಸಿನ ಅಪರಾಧಿ ಅಕ್ಷಯ್ ಕುಮಾರ್ ಸಿಂಗ್ ಗೆ ಗಲ್ಲುಶಿಕ್ಷೆ ಖಾಯಂಗೊಳಿಸಿ ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ.

7 ವರ್ಷಗಳ ಹಿಂದೆ ನವದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಲ್ಲಿ ಒಬ್ಬರಾದ ಅಕ್ಷಯ್ ಠಾಕೂರ್ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್​ ಅಪರಾಧಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ಅಪರಾಧಿಯ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿದಿದೆ.

2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಅಕ್ಷಯ್​ ಠಾಕೂರ್​​​, ಪವನ್​ ಗುಪ್ತಾ, ವಿನಯ್​ ಶರ್ಮಾ, ಮುಖೇಶ್​ ಸಿಂಗ್​ ಮತ್ತು ರಾಮ್​ ಸಿಂಗ್​ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ನಾಲ್ವರು ಅಪರಾಧಿಗಳಲ್ಲಿ ಪವನ್ ಗುಪ್ತಾ, ವಿನಯ್ ಶರ್ಮಾ ಮತ್ತು ಮುಖೇಶ್ ಸಿಂಗ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ತಿರಸ್ಕೃತಗೊಂಡಿತ್ತು. ಮತ್ತೋರ್ವ ಅಪರಾಧಿ ಅಕ್ಷಯ್ ಠಾಕೂರ್ ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯಿಂದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್​ಎ ಬೋಬ್ಡೆ ಮಂಗಳವಾರ ಹಿಂದೆ ಸರಿದಿದ್ದರು. ನ್ಯಾ. ಬೋಬ್ಡೆ ಅವರ ಸಂಬಂಧಿಯೊಬ್ಬರು ನಿರ್ಭಯಾ ಕುಟುಂಬದ ಪರವಾಗಿ ಈ ಕೇಸಿನಲ್ಲಿ ವಕಾಲತ್ತು ವಹಿಸಿದ್ದರಿಂದ ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದರು.

ಇಂದು ಬೆಳಗ್ಗೆ ಆರ್. ಭಾನುಮತಿ, ಅಶೋಕ್ ಭೂಷಣ್ ಮತ್ತು ಎ.ಎಸ್. ಬೋಪಣ್ಣ ಅವರ ತ್ರಿಸದಸ್ಯ ಪೀಠ ಅಕ್ಷಯ್ ಠಾಕೂರ್ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ್ದು, ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದಿದೆ. ಈ ಮೂಲಕ ಐತಿಹಾಸಿಕ ತೀರ್ಪು ನೀಡಿರುವ ಸುಪ್ರೀಂಕೋರ್ಟ್​ ನಿರ್ಧಾರದಿಂದ ನಿರ್ಭಯಾ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ದೋಷಿ ಅಕ್ಷಯ್ ಠಾಕೂರ್ ಪರ ಬೆಳಗ್ಗೆ ವಾದ ಮಂಡಿಸಿರುವ ಎ.ಪಿ. ಸಿಂಗ್, ಪ್ರಕರಣದಲ್ಲಿ ರಾಜಕೀಯ ಒತ್ತಡವಿದೆ. ಮಾಧ್ಯಮಗಳ ಒತ್ತಡವೂ ಸಾಕಷ್ಟಿದೆ. ಈ ಪ್ರಕರಣದಲ್ಲಿ ಸಿಬಿಐ ತನಿಖೆ ಆಗಿಲ್ಲ. ಬಡವ ಎನ್ನುವ ಕಾರಣಕ್ಕೆ ಗಲ್ಲುಶಿಕ್ಷೆ ನೀಡಲಾಗಿದೆ. ಶ್ರೀಮಂತರಿಗೆ ಯಾರಿಗೂ ಗಲ್ಲು ನೀಡಿಲ್ಲ. ಈವರೆಗೆ ಶ್ರೀಮಂತರಿಗೆ ಗಲ್ಲುಶಿಕ್ಷೆ ನೀಡಿಲ್ಲ. ಸಾಕ್ಷಿಗಳನ್ನು ಖರೀದಿ ಮಾಡಲಾಗಿದೆ. ಸಂತ್ರಸ್ತೆಯ ಸ್ನೇಹಿತನಿಂದ ಸುಳ್ಳು ಸಾಕ್ಷ್ಯ ಹೇಳಿಸಲಾಗಿದೆ. ಸಾಕ್ಷಿಗೆ ಲಕ್ಷಾಂತರ ರೂ. ಕೊಡಲಾಗಿದೆ. ಬಡವರಿಗೆ ಶಿಕ್ಷೆ ವಿಧಿಸುವಾಗ ರಿಯಾಯಿತಿ ನೀಡಲಾಗುತ್ತದೆ. ರಿಯಾಯಿತಿ ನೀಡಬೇಕೆಂದು ಗಾಂಧಿ ಹೇಳಿದ್ದಾರೆ. ದೆಹಲಿಯಲ್ಲಿ ಅತಿಯಾದ ವಾಯುಮಾಲಿನ್ಯವಿದೆ. ಕಲುಷಿತ ನೀರನ್ನು ಬಳಸಲಾಗುತ್ತಿದೆ. ವ್ಯಕ್ತಿಯ ಜೀವನಕಾಲ ಕುಗ್ಗುತ್ತಿದೆ. ಇಂಥ ಸ್ಥಿತಿಯಲ್ಲಿ ಗಲ್ಲುಶಿಕ್ಷೆ ಬೇಕೇ? ಎಂದು ವಾದ ಮಂಡಿಸಿದ್ದರು.

ಕೇಂದ್ರ ಸರ್ಕಾರದ ಪರ ತುಷಾರ್ ಮೆಹ್ತಾ ವಾದ ಮಂಡಿಸಿದ್ದು, ಈ ಪ್ರಕರಣದಲ್ಲಿ ಈಗಾಗಲೇ ಮೂರು ಬಾರಿ ತೀರ್ಪು ನೀಡಲಾಗಿದೆ. ಕೆಳಹಂತ ಮತ್ತು ಸುಪ್ರೀಂ ಕೋರ್ಟ್ ಎರಡೂ ಕಡೆ ತೀರ್ಪು ಬಂದಿದೆ. ಈಗ ಮತ್ತೊಮ್ಮೆ ತೀರ್ಪು ನೀಡಬೇಕಾ ಎಂಬುದನ್ನು ನೀವೇ ನಿರ್ಧರಿಸಿ. ಹಿಂದೆ ಮೂರು ಪರಿಶೀಲನೆ ಅರ್ಜಿ ಸಲ್ಲಿಸಿದ್ದರು. ಆ ಮೂರು ಅರ್ಜಿಗಳು ವಜಾ ಆಗಿವೆ ಎಂದಿದ್ದರು.ಎರಡೂ ಕಡೆಯ ವಾದಗಳನ್ನು ಆಲಿಸಿದ ತ್ರಿಸದಸ್ಯ ಪೀಠ ಜನವರಿ ಎರಡನೇ ವಾರದೊಳಗೆ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರಕ್ಕೆ ಇಂದು ಬೆಳಗ್ಗೆ ಸೂಚನೆ ನೀಡಿತ್ತು. ಇದೀಗ ಸುಪ್ರೀಂಕೋರ್ಟ್​ ತ್ರಿಸದಸ್ಯ ಪೀಠ ಈ ಬಗ್ಗೆ ಅಂತಿಮ ತೀರ್ಪು ಪ್ರಕಟಿಸಿದ್ದು, ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸುವ ಮೂಲಕ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದೆ.

ಏನಿದು ಘಟನೆ?:
ದೆಹಲಿಯಲ್ಲಿ 2012ರ ಡಿಸೆಂಬರ್ 16ರಂದು ರಾತ್ರಿ ತನ್ನ ಗೆಳೆಯನೊಂದಿಗೆ ಹೊರಟಿದ್ದ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ 6 ಜನ ಹಲ್ಲೆ ನಡೆಸಿದ್ದರು. ಚಲಿಸುತ್ತಿದ್ದ ಬಸ್​ನಲ್ಲಿಯೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಯ ಗೆಳೆಯನನ್ನು ಬಸ್​ನಿಂದ ಹೊರಗೆ ದಬ್ಬಿದ್ದರು. 23 ವರ್ಷದ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿದ್ದಷ್ಟೇ ಅಲ್ಲದೆ ಕಬ್ಬಿಣದ ಸರಳಿನಿಂದ ಆಕೆಯ ತಲೆ, ಗುಪ್ತಾಂಗಗಳಿಗೆ ದಾಳಿ ನಡೆಸಿ ಬಸ್​ನಿಂದ ಹೊರಗೆ ತಳ್ಳಿದ್ದರು. ಈ ಕೃತ್ಯದಿಂದ ಆಕೆಯ ಕರುಳು, ಗುಪ್ತಾಂಗಗಳಿಗೆ ತೀವ್ರ ಹಾನಿಯಾಗಿತ್ತು.

ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರೂ ಆಕೆ ಬದುಕುಳಿಯಲಿಲ್ಲ. ಡಿ. 29ರಂದು ಆಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಳು. ತನ್ನ ಈ ಸ್ಥಿತಿಗೆ ಕಾರಣರಾದವರ ವಿರುದ್ಧ ಹೋರಾಡಲೇಬೇಕೆಂದು 13 ದಿನಗಳ ಕಾಲ ಜೀವನ್ಮರಣದ ಹೋರಾಟ ನಡೆಸಿದ್ದ ಆ ಯುವತಿಯ ಪ್ರಕರಣಕ್ಕೆ ನಿರ್ಭಯಾ ಎಂದು ಹೆಸರಿಟ್ಟು ಆಕೆಯ ಸಾವಿಗೆ ನ್ಯಾಯ ದೊರಕಿಸಲೇಬೇಕೆಂದು ದೇಶಾದ್ಯಂತ ಒಕ್ಕೊರಲಿನ ಬೇಡಿಕೆ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಒಬ್ಬ ಬಾಲಾಪರಾಧಿ ಎಂದು ಬಿಡುಗಡೆಯಾಗಿದ್ದ. ಇನ್ನು ನಾಲ್ವರಿಗೆ ಗಲ್ಲು ಶಿಕ್ಷೆಯಾಗಿತ್ತು.

Comments are closed.