ಕರ್ನಾಟಕ

ಪೌರತ್ವ ಕಾಯ್ದೆ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ; ಬೀದಿಗಿಳಿದ ಐಐಎಸ್​ಸಿ ವಿದ್ಯಾರ್ಥಿಗಳು

Pinterest LinkedIn Tumblr

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಹಲವೆಡೆ ಹೊತ್ತಿಕೊಂಡಿರುವ ಪ್ರತಿಭಟನೆಯ ಕಿಚ್ಚು ರಾಜ್ಯದಲ್ಲೂ ಕೆಲವೆಡೆ ಪ್ರತಿಧ್ವನಿಸುತ್ತಿದೆ. ಬೆಂಗಳೂರು ಹಾಗೂ ರಾಜ್ಯದ ವಿವಿಧೆಡೆ ನಿನ್ನೆ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಇಂದು ವಿಶ್ವದ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್​ಸಿ)ನ ಕೆಲ ವಿದ್ಯಾರ್ಥಿಗಳು ಪ್ರತಿಭಟನೆಗೆ ಧುಮುಕಿದ್ಧಾರೆ. ಅತ್ತ, ಮೈಸೂರಿನಲ್ಲಿ ಇವತ್ತು ಪ್ರತಿಭಟನೆಗಳನ್ನು ನಡೆಯದಂತೆ ಕೆಲ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಎನ್​ಆರ್​ಸಿ ಯೋಜನೆ, ಪೌರತ್ವ ಕಾಯ್ದೆ, ಜಾಮಿಯಾ ವಿದ್ಯಾರ್ಥಿಗಳ ಮೇಲೆ ಪೊಲೀಸರ ಪ್ರಹಾರ ಘಟನೆಯನ್ನು ವಿರೋಧಿಸಿ ದೇಶಾದ್ಯಂತ ಹಲವು ಶಿಕ್ಷಣ ಸಂಸ್ಥೆಗಳು ಪ್ರತಿಭಟನೆ ನಡೆಸುತ್ತಿವೆ. ಇದರಲ್ಲಿ ಬೆಂಗಳೂರಿನ ಐಐಎಸ್​ಸಿ ಶಿಕ್ಷಣ ಸಂಸ್ಥೆಯೂ ಸೇರಿದೆ. ಐಐಎಸ್​ಸಿ ಆವರಣ ಮುಂಭಾಗ ಪ್ರತಿಭಟನೆ ನಡೆಸಲು ಅದರ ವಿದ್ಯಾರ್ಥಿಗಳು ಕರೆ ನೀಡಿದ್ದಾರೆ.

ಇನ್ನು, ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪ್ರತಿಭಟನೆ ನಡೆಸದಂತೆ ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಆದೇಶ ಹೊರಡಿಸಿದ್ದಾರೆ. ಮೈಸೂರಿನ ಗಾಂಧಿ ಚೌಕಿ, ಮಹಾವೀರ್ ವೃತ್ತ, ಎ.ವಿ. ರಸ್ತೆ, ಅಶೋಕ ರಸ್ತೆ ಮತ್ತು ಪುರಭವನದ 500 ಮೀಟರ್ ಸುತ್ತಮುತ್ತ ಯಾವುದೇ ಪ್ರತಿಭಟನೆ, ಮೆರವಣಿಗೆ ನಡೆಸದಂತೆ ಮಧ್ಯ ರಾತ್ರಿ 12ಗಂಟೆಯವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ನಿನ್ನೆ, ಬೆಂಗಳೂರಿನ ವಿವಿಧೆಡೆ ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘಟನೆಗಳು ಹಾಗೂ ವಿವಿಧ ಸಂಸ್ಥೆಗಳು ಪ್ರತಿಭಟನೆ ನಡೆಸಿದವು. ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಎಸ್​ಡಿಪಿಐ, ಸಿಪಿಐಎಂ, ಸಿಪಿಐ, ಸಿಪಿಐಎಂಎಲ್(ರೆಡ್ ಸ್ಟಾರ್), ಪರ್ಯಾಯ ಕಾನೂನು ವೇದಿಕೆ, ಜನಶಕ್ತಿ, ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ಅಲ್ಪಸಂಖ್ಯಾತರ ಸೇನೆ, ಜಾಮಿಯಾ ಇಸ್ಲಾಮಿಕ್ ಮುಂತಾದ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡವು. ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ, ಶೃತಿ ಹರಿಹರನ್, ಚೇತನ್, ಕವಿತಾ ಲಂಕೇಶ್, ರಘು ದೀಕ್ಷಿತ್, ಬ್ರಿಜೇಶ್ ಕಾಳಪ್ಪ ಹಾಗೂ ವಿವಿಧ ಪಕ್ಷಗಳ ಕೆಲ ನಾಯಕರು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.

Comments are closed.