ಕರ್ನಾಟಕ

ಮಟನ್‌ ಬಿರಿಯಾನಿ ಸಂಚಾರಿ ವಾಹನ ಆರಂಭ

Pinterest LinkedIn Tumblr


ಬೆಂಗಳೂರು: ಮಟನ್‌ ಪ್ರಿಯರಿಗೆ ಸಿಹಿ ಸುದ್ದಿ. ರಾಜ್ಯ ಸರ್ಕಾರವೇ ಈಗ ಕುರಿ ಮಾಂಸದ ಸಂಚಾರಿ ಮಳಿಗೆಗಳನ್ನು ತೆರೆಯುವ ಮೂಲಕ ಮಾಂಸ ಪ್ರಿಯರಿಗೆ ತಾಜಾ ಮಾಂಸದ ಊಟ ನೀಡಲು ಮುಂದಾಗಿದೆ. ಜತೆಗೆ ಅ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಮುಂದಾಗಿದೆ.
ರಾಜ್ಯ ಸರ್ಕಾರದ ಪಶು ಸಂಗೋಪನೆ ಇಲಾಖೆ ವ್ಯಾಪ್ತಿಯಲ್ಲಿ ಬರುವ ಕುರಿ ಮತ್ತು ಉಣ್ಣೆ ನಿಗಮದ ವತಿಯಿಂದ ರಾಜ್ಯದ 181 ಕಡೆಗಳಲ್ಲಿ ಕುರಿ ಮಾಂಸ ಮತ್ತು ಮಾಂಸದಿಂದ ತಯಾರಿಸಿದ ಪದಾರ್ಥಗಳ ಸಂಚಾರಿ ಮಾರಾಟ ಮಳಿಗೆಯನ್ನು ತೆರೆಯಲಾಗುತ್ತಿದೆ. ಈ ಸಂಚಾರಿ ವಾಹನಗಳಿಗೆ ಗುರುವಾರ ಅಧಿಕೃತ ಚಾಲನೆ ದೊರೆತಿದೆ. “ಫ್ರೆಶ್‌’ ಎಂದು ಹೇಳಿ ಮಾಂಸ ಮಾರಾಟ ಮಾಡುವ ಖಾಸಗಿ ಮಾರಾಟಗಾರರಿಗೆ ಸ್ಪರ್ಧೆ ಒಡ್ಡಲು ಮತ್ತು ಜನರಿಗೆ ಉತ್ತಮ ಗುಣಮಟ್ಟದ ಮಾಂಸ ಹಾಗೂ ಮಾಂಸದ ಉತ್ಪನ್ನಗಳನ್ನು ತಲುಪಿಸಲು ಸರ್ಕಾರ ಈ ಹೆಜ್ಜೆ ಇಟ್ಟಿದೆ.

ರಾಜ್ಯ ಸರ್ಕಾರ 2018-19 ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ ಹಾಲು ಉತ್ಪಾದಕರ ಸಹಾಯ ಧನಕ್ಕೆ ನೀಡಿದ ಅನುದಾನದಲ್ಲಿ ಆಗಿನ ಪಶು ಸಂಗೋಪನೆ ಸಚಿವ ವೆಂಕಟರಾವ್‌ ನಾಡಗೌಡ, ಸರ್ಕಾರದ ವತಿಯಿಂದಲೇ ಶುಚಿ ಹಾಗೂ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಮಾಂಸ ಹಾಗೂ ಅದರ ಉತ್ಪನ್ನಗಳ ಮಾರಾಟ ಮಾಡುವ ಬಗ್ಗೆ ತೀರ್ಮಾನ ಕೈಗೊಂಡಿದ್ದರು. ಈ ಮೂಲಕ ಸಾರ್ವಜನಿಕರಿಗೆ ಉತ್ತಮ ಮಾಂಸ ಒದಗಿಸುವುದು ಹಾಗೂ ಪರಿಶಿಷ್ಟ ವರ್ಗಗಳ ಯುವಕರಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಿದ್ದರು. ಎಸ್‌ಎಸ್‌ಎಲ್‌ಸಿ ಪಾಸ್‌ ಆಗಿರುವ ಎಸ್ಸಿ ,ಎಸ್ಟಿ ಸಮುದಾಯದ ನಿರುದ್ಯೋಗಿ ಯುವಕರಿಗೆ ಈ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಹಿಂದಿನ ಸರ್ಕಾರದ ಉತ್ತಮ ಯೋಜನೆಯನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹಾಲಿ ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್‌ ಆಸಕ್ತಿ ವಹಿಸಿ ಕುರಿ ಮತ್ತು ಉಣ್ಣೆ ನಿಗಮದ ಮೂಲಕ ಯೋಜನೆ ಕಾರ್ಯರೂಪಕ್ಕೆ ತರುವ ಪ್ರಯತ್ನ ನಡೆಸಿದ್ದಾರೆ.

ಹೈದರಾಬಾದ್‌ನಲ್ಲಿ ತರಬೇತಿ: ಈಗಾಗಲೇ ರಾಜ್ಯಾದ್ಯಂತ ಸುಮಾರು 181 ಎಸ್ಸಿ ಹಾಗೂ ಎಸ್ಟಿ ನಿರುದ್ಯೋಗಿ ಯುವಕರನ್ನು ಪ್ರತಿ ಜಿಲ್ಲೆಗಳಿಂದ ಆಯ್ಕೆ ಮಾಡಲಾಗಿದೆ. ಹೈದರಾಬಾದ್‌ನ ರಾಷ್ಟ್ರೀಯ ಮಾಂಸ ಸಂಶೋಧನಾ ಕೇಂದ್ರದಲ್ಲಿ ತರಬೇತಿ ನೀಡಲಾಗಿದೆ. ಆಯ್ಕೆಯಾದ ಫ‌ಲಾನುಭವಿಗಳಿಗೆ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ 11 ಲಕ್ಷ ರೂ.ಗಳ ಧನ ಸಹಾಯ ನೀಡಲಾಗುತ್ತಿದ್ದು, ಆ ಹಣದಲ್ಲಿ ಫ‌ಲಾನುಭವಿಗಳು ಸಂಚಾರಿ ಮಾಂಸ ಮಾರಾಟ ವಾಹನ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರ ನೀಡಿರುವ ಅನುದಾನದಲ್ಲಿ ಫ‌ಲಾನುಭವಿಗಳು 2.75 ಲಕ್ಷ ರೂ. ಮಾತ್ರ ಸರ್ಕಾರಕ್ಕೆ ಮರು ಪಾವತಿಗೆ ಸೂಚಿಸಲಾಗಿದ್ದು, ಉಳಿದ 8.25 ಲಕ್ಷ ರೂ. ಸಬ್ಸಿಡಿ ನೀಡಲಾಗುತ್ತಿದೆ. ಫ‌ಲಾನುಭವಿಗಳು 2.75 ಲಕ್ಷ ರೂ. ಮಾತ್ರ ಸಹಾಯಧನವನ್ನು ಬ್ಯಾಂಕ್‌ಗೆ ಮರುಪಾವತಿಸಬೇಕು.

ಸ್ಥಳೀಯವಾಗಿ ಮಾಂಸ ಖರೀದಿ: ರಾಜ್ಯ ಕುರಿ ಮತ್ತು ಉಣ್ಣೆ ನಿಗಮದ ಕೆಎಂಎಫ್ ಮಾದರಿಯಲ್ಲಿ ಮಾಂಸ ಮಾರಾಟ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದು, ಆ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲಿಯವರೆಗೂ ಖಾಸಗಿಯಾಗಿ ಮಾಂಸ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, ನಂತರ ನಿಗಮದ ವತಿಯಿಂದ ತಯಾರಾಗುವ ಮಾಂಸವನ್ನೇ ಖರೀದಿಗೆ ಸೂಚಿಸಲು ನಿಗಮದ ಅಧಿಕಾರಿಗಳು ನಿರ್ಧರಿಸಿದ್ದಾರೆ. ಸಂಚಾರಿ ಮಟನ್‌ ಮಳಿಗೆ ಮಾಂಸ ಮಾರಾಟ ವಾಹನ ಅತ್ಯಾಧುನಿಕ ಸೌಲಭ್ಯ ಹೊಂದಿದ್ದು, ರೆಫ್ರಿಜರೇಟರ್‌, ವಾಟರ್‌ ಟ್ಯಾಂಕ್‌, ವಾಶ್‌ ಬೇಸಿನ್‌, ಮಾಂಸ ಸ್ವಚ್ಚಗೊಳಿಸುವ ಸಾಧನ
ಒಳಗೊಂಡಿದ್ದು ನಗರ ಪ್ರದೇಶದ ಯಾವುದೇ ಭಾಗದಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ದಿನ ಸುಮಾರು 2 ರಿಂದ 3 ಸಾವಿರ ರೂ. ವರೆಗೂ ವ್ಯವಹಾರ ನಡೆಸಲಿದ್ದಾರೆ ಎಂದು ನಿಗಮದ ಅಧಿಕಾರಿಗಳು ಹೇಳುತ್ತಾರೆ.

ಸರ್ಕಾರದ ವತಿಯಿಂದಲೇ ತಾಜಾ ಮಾಂಸ ಹಾಗೂ ಮಾಂಸದ ಉತ್ಪನ್ನಗಳನ್ನು ಜನರಿಗೆ ತಲುಪಿಸಲು ಹಾಗೂ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಲು ಈ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಈ ಯೋಜನೆ ಹೆಚ್ಚು ಉಪಯುಕ್ತವಾಗುತ್ತದೆ. ಅಲ್ಲದೇ ಜನರಿಗೆ ವಿಶ್ವಾಸಾರ್ಹ ಮಾಂ ಸದ ಉತ್ಪನ್ನ ಲಭ್ಯವಾಗುತ್ತದೆ.
ಬಿ.ಎಸ್‌.ಜಂಬಗಿ, ವ್ಯವಸ್ಥಾಪಕ ನಿರ್ದೇಶಕರು, ಕುರಿ ಮತ್ತು ಉಣ್ಣೆ ನಿಗಮ

Comments are closed.