
ಬೆಂಗಳೂರು(ಡಿ.12): ತೀವ್ರ ಹೃದಯ ಸಮಸ್ಯೆಯಿಂದಾಗಿ ಆಂಜಿಯೋಪ್ಲಾಸ್ಟ್ ಶಸ್ತ್ರ ಚಿಕಿತ್ಸೆಗೆ ಒಳಗಾದ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಇಂದು ಸಂಜೆ 7 ಗಂಟೆಗೆ ಮಲ್ಲೇಶ್ವರಂನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯರ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿದ್ದಾರೆ. ಈ ವೇಳೆ ಸಿಎಂ ಬಿ.ಎಸ್ ಯಡಿಯೂರಪ್ಪರೊಂದಿಗೆ ಸಚಿವ ಕೆ.ಎಸ್ ಈಶ್ವರಪ್ಪ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಉಪಸ್ಥಿತರಿದ್ದರು.
ಕಾವೇರಿ ನಿವಾಸದಲ್ಲಿದ್ದ ಸಿದ್ದರಾಮಯ್ಯರಲ್ಲಿ ಬುಧವಾರ ಬೆಳಗ್ಗೆ 6.30ರ ಸಮಯದಲ್ಲಿ ಅಧಿಕ ರಕ್ತದೊತ್ತಡದ ಜತೆಗೆ ಎದೆನೋವು ಕಾಣಿಸಿಕೊಂಡಿತ್ತು. ಈ ಬೆನ್ನಲ್ಲೇ ಸಿದ್ದರಾಮಯ್ಯರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಲ್ಲೇಶ್ವರಂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಹೃದಯದ ಒಂದು ನಾಳ ಬ್ಲಾಕ್ ಆಗಿತ್ತು. ಅದಕ್ಕೆ ಸ್ಟಂಟ್ ಅಳವಡಿಸಿದ್ದಾರೆ. ಇದೀಗ ಆರೋಗ್ಯವಾಗಿದ್ದೇನೆ. ಯಾರೂ ಕೂಡ ಊಹಾಪೋಹಗಳಿಗೆ ಕಿವಿ ಕೊಡಬಾರದು. ಆಸ್ಪತ್ರೆ ಬಳಿ ಯಾರೂ ಬರುವುದು ಬೇಡ. ಎರಡು ದಿನಗಳಾದ ಬಳಿಕ ಮನೆಗೆ ಬನ್ನಿ ಎಂದು ಮನವಿ ಮಾಡಿದರು.
2000 ಜುಲೈ ತಿಂಗಳಲ್ಲಿ ಎರಡು ರಕ್ತನಾಳಗಳು ಬ್ಲಾಕ್ ಆಗಿದ್ದವು. ದೆಹಲಿ ಎಸ್ಕಾರ್ಟ್ ಆಸ್ಪತ್ರೆಯಲ್ಲಿ ಸ್ಟಂಟ್ ಹಾಕಿಸಿದ್ದೆ. 19 ವರ್ಷಗಳಿಂದ ಯಾವುದೇ ಸಮಸ್ಯೆ ಆಗಿರಲಿಲ್ಲ. ಇದೀಗ ಆ ಸ್ಟಂಟ್ ಹಾಕಿದ್ದ ಎರಡು ನಾಳಗಳಲ್ಲಿ ಒಂದು ಬ್ಲಾಕ್ ಆಗಿತ್ತು. ಅಂಜಿಯೋಗ್ರಾಮ್ ಮಾಡಿ, ಬ್ಲಾಕ್ ಆಗಿದ್ದ ನಾಳದಲ್ಲಿ ಮತ್ತೊಂದು ಸ್ಟಂಟ್ ಹಾಕಿದ್ದಾರೆ ಅಷ್ಟೇ. ಅದು ಬಿಟ್ಟರೇ ಯಾವುದೇ ತೊಂದರೆ ಇಲ್ಲ. ನಾನು ಆರೋಗ್ಯವಾಗಿದ್ದೇನೆ. ಎರಡು ದಿನ ವಿಶ್ರಾಂತಿ ಪಡೆಯುವ ನಿಟ್ಟಿನಲ್ಲಿ ಇಲ್ಲೇ ಉಳಿಯುವಂತೆ ವೈದ್ಯರು ಸೂಚಿಸಿದ್ದಾರೆ ಎಂದರು.
Comments are closed.