ಕರ್ನಾಟಕ

ರಾಜ್ಯದಲ್ಲಿ 4 ವರ್ಷಗಳಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳೆಷ್ಟು?

Pinterest LinkedIn Tumblr


ಬೆಂಗಳೂರು: ಹೈದರಾಬಾದ್​ ಮತ್ತು ಉನ್ನಾವ್​ನಲ್ಲಿ ನಡೆದ ಪೈಶಾಚಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬೆನ್ನಲ್ಲೇ ದೇಶದ ಎಲ್ಲಾ ರಾಜ್ಯಗಳೂ ಮತ್ತೊಮ್ಮೆ ಮಹಿಳಾ ರಕ್ಷಣೆ ಬಗ್ಗೆ ಮುಂಜಾಗೃತಾ ಕ್ರಮ ತೆಗೆದುಕೊಳ್ಳುವತ್ತ ಸಾಗಿವೆ. ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಮುನ್ನೆಲೆಗೆ ಬಂದಾಗಲೆಲ್ಲಾ ರಾಜ್ಯ ಗೃಹ ಇಲಾಖೆ ಮತ್ತು ಪೊಲೀಸರು ಮೈಕೊಡವಿ ನಿಲ್ಲುತ್ತಾರೆ. ಆದರೆ ಪರಿಸ್ಥಿತಿಯ ಬಿಸಿ ಕಡಿಮೆಯಾದಂತೆ ಮರೆತುಹೋಗುತ್ತಾರೆ.

ದೆಹಲಿಯಲ್ಲಿ ನಿರ್ಭಯಾ ಅತ್ಯಾಚಾರವಾದ ಸಂದರ್ಭದಲ್ಲೂ ಇಡೀ ದೇಶ ಒಗ್ಗಟ್ಟಿನಿಂದ ನ್ಯಾಯಕ್ಕಾಗಿ ತುಡಿದಿತ್ತು. ಅದರ ನಂತರ ಭಾರತೀ ದಂಡ ಸಂಹಿತೆ ಸೆಕ್ಷನ್​ 376 – ಎ ಇಂದ ಎಫ್​ ವರೆಗೂ ಗಣನೀಯ ಬದಲಾವಣೆ ಕಂಡಿತ್ತು. ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾನೂನನ್ನು ಮತ್ತಷ್ಟು ಸದೃಢಗೊಳಿಸಲಾಗಿತ್ತು. ಆದರೆ ಅತ್ಯಾಚಾರ ಪ್ರಕರಣಗಳು ಮಾತ್ರ ಇಂದಿಗೂ ನಡೆಯುತ್ತಲೇ ಇವೆ. ಈ ಸಂದರ್ಭದಲ್ಲಿ ಮತ್ತೊಂದು ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಕರ್ನಾಟಕ ರಾಜ್ಯ ಒಂದರಲ್ಲೇ ಕಳೆದ ನಾಲ್ಕು ವರ್ಷಗಳಲ್ಲಿ ಬರೋಬ್ಬರಿ 5,764 ಅತ್ಯಾಚಾರ ಪ್ರಕರಣಗಳು ಘಟಿಸಿವೆ. ಅಧಿಕೃತವಾಗಿ ದಾಖಲಾದ ಪ್ರಕರಣಗಳೇ ಇಷ್ಟು ದೊಡ್ಡ ಪ್ರಮಾಣದಲ್ಲಿದೆ ಎಂದರೆ ಪೊಲೀಸರ ಗಮನಕ್ಕೆ ಬರದೇಹೋದ ಪ್ರಕರಣಗಳ ಪಟ್ಟಿ ಎಷ್ಟು ದೊಡ್ಡದಿರಬಹುದು. ಈ ಮಾಹಿತಿಯನ್ನು ಖುದ್ದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಮಹಿಳೆಯರ ರಕ್ಷಣೆ ಬಗ್ಗೆ ಗೃಹಸಚಿವರು ಇಂದು ರಾಜ್ಯ ಪೊಲೀಸ್​ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದರು. ಸಭೆಯ ಬೆನ್ನಲ್ಲೇ ಮಾತನಾಡಿದ ಅವರು ಈ ಆಘಾತಕಾರಿ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದಾರೆ.

ಅಂಕಿ ಅಂಶ ಹೇಳುವುದೇನು?:

2015ರಿಂದ 19ರವರೆಗೆ 5764 ಕೇಸ್ ದಾಖಲು
ಈ ಬಗ್ಗೆ 4904 ಚಾರ್ಜ್ಶೀಟ್ ಹಾಕಲಾಗಿದೆ
ಹಲವು ಕಾರಣಕ್ಕೆ 563 ಕೇಸ್ ದಾಖಲಾಗಿಲ್ಲ
329 ಕೇಸ್ಗಳಲ್ಲಿ FSL ವರದಿ ಬಾಕಿಯಿದೆ
ಕೆಳವರ್ಗದ ಮಹಿಳೆಯರ ಮೇಲೆ ಅತ್ಯಾಚಾರ ಸಂಖ್ಯೆ ಹೆಚ್ಚು
ಕಾರ್ಮಿಕರಿರುವ ಕಡೆ ಅತ್ಯಾಚಾರ ಹೆಚ್ಚಾಗಿವೆ

ತೆಗೆದುಕೊಂಡ ಕ್ರಮ?:

ರಾತ್ರಿ ಪಾಳಿಗೆ ಹೆಚ್ಚು ಪೊಲೀಸ್
ಹೆಣ್ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ
ರಾಜ್ಯದಲ್ಲಿ 22 ಪೊಲೀಸ್ ತರಬೇತಿ ಶಾಲೆಗಳಿವೆ
ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ
30 ಲಕ್ಷ ಮಹಿಳೆಯರಿಗೆ ಸುರಕ್ಷಾ ತರಬೇತಿ
ರಾತ್ರಿ ಪಾಳಿಗೆ ಮಹಿಳೆಯರ ನೇಮಕ
ಈಗಾಗಲೇ ಸುರಕ್ಷಾ ಆ್ಯಪ್ ಜಾರಿಗೆ
ಬೆಂಗಳೂರಿನಿಂದ ಹೊರಗೂ ಆ್ಯಪ್ ಜಾರಿ
500 ಗಸ್ತುವಾಹನಗಳ ನಿಯುಕ್ತಿಗೆ ಚಿಂತನೆ
ಜಿಪಿಎಸ್ ಆಧಾರಿತ ಗಸ್ತು ವ್ಯವಸ್ಥೆ

ಇವು ಸದ್ಯ ರಾಜ್ಯ ಬಿಜೆಪಿ ಸರ್ಕಾರ ಅತ್ಯಾಚಾರ ತಡೆಗಟ್ಟಲು ಮತ್ತು ಮಹಿಳಾ ಸುರಕ್ಷತೆಗೆ ತೆಗೆದುಕೊಳ್ಳಲಿರುವ ಕ್ರಮ ಎಂದು ಗೃಹ ಸಚಿವರು ಮಾಹಿತಿ ನೀಡಿದರು.

ಇದರ ಜತೆಗೆ, ಡ್ರಗ್ಸ್ ಕಂಟ್ರೋಲ್ ಬಗ್ಗೆಯೂ ಒತ್ತು ನೀಡಿದ್ದೇವೆ ಎಂದ ಅವರು, ಮಾದಕ ವಸ್ತುಗಳು ಹೊರರಾಜ್ಯ, ವಿದೇಶಗಳಿಂದ ಬರುತ್ತಿದೆ. ಹೊಸ ಮಾದರಿಯಲ್ಲಿ ಡ್ರಗ್ಸ್ ಪೂರೈಕೆಯಾಗ್ತಿದೆ. ಇದನ್ನ ಮಟ್ಟ ಹಾಕಲು ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇನೆ ಎಂದರು. ಮಾದಕ ವಸ್ತು ಸೇವನೆಯಿಂದಲೂ ಅಪರಾಧ ಕೃತ್ಯಗಳು ಅದರಲ್ಲೂ ಅತ್ಯಾಚಾರದಂತ ಹೇಯ ಕೃತ್ಯಗಳು ನಡೆಯುತ್ತಿವೆ ಎಂದು ಬೊಮ್ಮಾಯಿ ಅಭಿಪ್ರಾಯ ಪಟ್ಟರು.

Comments are closed.