ಲಕ್ನೋ: ಸಫ್ಜರ್ ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉನ್ನಾವ್ ಅತ್ಯಾಚಾರ ಸಂತ್ರಸ್ತೆ ಶುಕ್ರವಾರ ತಡರಾತ್ರಿ (11.40) ಸಾವನ್ನಪ್ಪಿದ್ದು, ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಉತ್ತರಪ್ರದೇಶ ಸೇರಿದಂತೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.
ಗುರುವಾರ ಬೆಳಗ್ಗಿನ ಜಾವ 23 ವರ್ಷದ ಮಹಿಳೆ ಮೇಲೆ ಹಿಂದೆ ಅತ್ಯಾಚಾರ ಎಸಗಿದ ಇಬ್ಬರು ಆರೋಪಿಗಳು ಸೇರಿದಂತೆ ಐವರು ಪೆಟ್ರೋಲ್ ಸುರಿದು ಬೆಂಕಿಹಚ್ಚಿದ್ದರು. ಶೇ.90ರಷ್ಟು ಸುಟ್ಟು ಹೋಗಿದ್ದ ಸಂತ್ರಸ್ತೆಯನ್ನು ಮೊದಲಿಗೆ ಲಕ್ನೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ದೆಹಲಿಗೆ ಹೆಲಿಕಾಪ್ಟರ್ ಮೂಲಕ ಸಫ್ಜರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶುಕ್ರವಾರ ತಡರಾತ್ರಿ ಹೃದಯಾಘಾತದಿಂದ ಆಕೆ ಸಾವನ್ನಪ್ಪಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿದ್ದವು.
ಸಾಯುವ ಮುನ್ನ ಆಕೆ ಸಹೋದರನಲ್ಲಿ ಹೇಳಿದ್ದೇನು?
ನನ್ನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ ಆರೋಪಿಗಳನ್ನು ಬದುಕಲು ಬಿಡಲೇಬಾರದು..ಅವರನ್ನು ಗಲ್ಲಿಗೇರಿಸಬೇಕು. ಅಷ್ಟೇ ಅಲ್ಲ ನಾನು ಬದುಕಬೇಕು..ಯಾಕೆಂದರೆ ಆರೋಪಿಗಳನ್ನು ಗಲ್ಲಿಗೇರಿಸುವುದನ್ನು ಕಣ್ಣಾರೆ ನೋಡಬೇಕು ಎಂದು ಆಸೆ ವ್ಯಕ್ತಪಡಿಸಿರುವುದಾಗಿ ಸಹೋದರ ಇಂಡಿಯಾಟುಡೇ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಆದರೆ ಇದು ಸಂತ್ರಸ್ತೆಯ ಕೊನೆಯ ಮಾತಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆಕೆ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದಳು. ಇದೀಗ ಆಕೆಯ ತಂದೆ ಕೂಡಾ, ನನ್ನ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಂದ ಆರೋಪಿಗಳನ್ನು ನೇಣಿಗೇರಿಸಬೇಕು ಇಲ್ಲವೇ ಹೈದರಾಬಾದ್ ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈದಂತೆ ಕೊಲ್ಲಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ ಎಂದು ವರದಿ ವಿವರಿಸಿದೆ.
ಯುಪಿ ವಿಧಾನಸೌಧ ಹೊರಗೆ ಅಖಿಲೇಶ್ ಯಾದವ್ ಧರಣಿ:
ರಾಜ್ಯದಲ್ಲಿ ಮಹಿಳೆಯರ ಮೇಲೆ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಮುಖ್ಯಮಂತ್ರಿ ಯೋಗಿ ನೇತೃತ್ವದ ಸರ್ಕಾರ ಅಪರಾಧ ತಡೆಯಲು ವಿಫಲವಾಗಿದೆ. ಹೀಗಾಗಿ ಯೋಗಿ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಉತ್ತರಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಶನಿವಾರ ಯುಪಿ ವಿಧಾನಸೌಧ ಹೊರಗೆ ಧರಣಿ ನಡೆಸುತ್ತಿದ್ದಾರೆ.
ಉತ್ತರಪ್ರದೇಶ ಮುಖ್ಯಮಂತ್ರಿ, ರಾಜ್ಯ ಗೃಹ ಸಚಿವ ಹಾಗೂ ಡಿಜಿಪಿ ರಾಜೀನಾಮೆ ಕೊಡದಿದ್ದರೆ, ನ್ಯಾಯ ಸಿಕ್ಕಂತೆ ಆಗುವುದಿಲ್ಲ. ರಾಜೀನಾಮೆ ಕೊಡದಿದ್ದಲ್ಲಿ ಉನ್ನಾವ್ ಪ್ರಕರಣದ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಯಲ್ಲಿಯೂ ಶೋಕ ಸಭೆ ನಡೆಸಲಾಗುವುದು ಎಂದು ಯಾದವ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಸಂತ್ರಸ್ತೆ ಮನೆಗೆ ಪ್ರಿಯಾಂಕಾ ಗಾಂಧಿ ಭೇಟಿ:
ಜೀವನ್ಮರಣ ಹೋರಾಟ ನಡೆಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಉನ್ನಾವ್ ಸಂತ್ರಸ್ತೆ ಮನೆಗೆ ಪ್ರಿಯಾಂಕಾ ಗಾಂಧಿ ಭೇಟಿ ನೀಡಿದ್ದು, ಉನ್ನಾವ್ ಘಟನೆ ನಡೆದ ನಂತರ ಆಕೆಗೆ ಯಾಕೆ ಭದ್ರತೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.
Comments are closed.