ಕರ್ನಾಟಕ

‘ತಂದೆಗೆ ಹುಟ್ಟಿದೆ ಎನ್ನುವುದಕ್ಕೆ ಸಾಕ್ಷಿ ಇದೆಯೇ’? ಈಶ್ವರಪ್ಪ

Pinterest LinkedIn Tumblr


ತೆಲಸಂಗ (ಬೆಳಗಾವಿ): ‘ಅಯೋಧ್ಯೆಯಲ್ಲಿ ರಾಮಮಂದಿರ ಇರುವ ಕುರಿತು ಕಾಂಗ್ರೆಸ್ಸಿಗರು ಸಾಕ್ಷಿ ಕೇಳ್ತಾರೆ, ನಾನು ಅವರಿಗೆ ಕೇಳ್ತೀನಿ, ನಿಮ್ಮಪ್ಪನಿಗೆ ನೀನು ಹುಟ್ಟಿದೆ ಎನ್ನುವುದಕ್ಕೆ ಸಾಕ್ಷಿ ಇದೆಯೇ?’ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ಧಾರೆ.

ಬೆಳಗಾವಿಯ ತೆಲಸಂಗ ಗ್ರಾಮದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಪರ ಮತಯಾಚನೆ ಸಭೆಯಲ್ಲಿ ಮಾತನಾಡಿದ ಅವರು ‘ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರು ಇದೇ ಭೂಮಿಯಲ್ಲಿ ಸಾಯಬೇಕು. ಪಾಕಿಸ್ತಾನದಲ್ಲಿಅಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದ ಮೇಲೆ ನಮ್ಮದೇನೂ ಅಭ್ಯಂತರವಿಲ್ಲ ಎನ್ನುತ್ತಿದ್ದಾರೆ. ನೀವ್ಯಾಕೆ ಈಗ ನಿಮ್ಮ ಅಪ್ಪನನ್ನು ಒಪ್ಪಿಕೊಳ್ಳಬೇಕು?’ ಎಂದು ಈಶ್ವರಪ್ಪ ಪ್ರಶ್ನಿಸಿದರು.

‘ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟೋದಕ್ಕೆ ಮುಸಲ್ಮಾನರೇ ವಿರೋಧಿಸುತ್ತಿಲ್ಲ. ಹೀಗಿರುವಾಗ ಕಾಂಗ್ರೆಸ್‌ನವರಿಗೆ ಏಕೆ ಉರಿ? ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವುದೇ ಕಾಂಗ್ರೆಸ್‌ ಕೆಲಸ’ ಎಂದು ಆರೋಪಿಸಿದ ಈಶ್ವರಪ್ಪ ‘ಲಕ್ಷ್ಮೀ ಹೆಬ್ಬಾಳ್ಕರ್ ಹೆಣ್ಣು ಮಗಳಾಗಿ ಅದೇನೇನೋ ಮಾತಾಡ್ತಿದ್ದಾಳೆ. ನಾವು ಹೆಣ್ಣನ್ನು ಗೌರವಿಸುತ್ತೇವೆ. ಅವರು ಗೌರವ ಉಳಿಸಿಕೊಳ್ಳುವುದು ಒಳಿತು’ ಎಂದು ಹರಿಹಾಯ್ದರು.

ಇತ್ತ ಬೆಳಗಾವಿ ಜಿಲ್ಲೆ ಘಟಪ್ರಭಾದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿದ ಸಿಎಂ ಯಡಿಯೂರಪ್ಪ, ‘ನನ್ನ ಸರ್ಕಾರಕ್ಕೆ ಬಹುಮತ ಸಿಗಬಾರದು ಎಂದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮಧ್ಯಂತರ ಚುನಾವಣೆಗೆ ಸಂಚು ರೂಪಿಸಿವೆ. ಆ ಪಕ್ಷಗಳ ನಾಯಕರು ಮುಖ್ಯಮಂತ್ರಿಯ ಕನಸು ಕಾಣುತ್ತಿದ್ದಾರೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಹಿಂದೆ ಇದ್ದ ಭ್ರಷ್ಟ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ರಮೇಶ್‌ ಜಾರಕಿಹೊಳಿ ತಮ್ಮ ಸ್ನೇಹಿತರಾದ 16 ಶಾಸಕರ ಜತೆ ದೃಢ ನಿರ್ಧಾರ ಮಾಡಿದರು. ಹೀಗಾಗಿಯೇ ಯಡಿಯೂರಪ್ಪ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗಿದೆ’ ಎಂದರು.

Comments are closed.