ಕರ್ನಾಟಕ

ಹುಳಿಮಾವು ಕೆರೆ ಕೋಡಿ ಪ್ರಕರಣ : ಸಂತ್ರಸ್ತರಿಗೆ 50 ಸಾವಿರ ರೂ.ಪರಿಹಾರ

Pinterest LinkedIn Tumblr

ಬೆಂಗಳೂರು: ನಗರದ ಹುಳಿಮಾವು ಬಳಿ ಭಾನುವಾರ ಕೆರೆ ಕೋಡಿ ಒಡೆದು ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸಂಜೆಯೊಳಗೆ 50 ಸಾವಿರ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಇದೇ ವೇಳೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅವರು ತನಿಖೆಗೆ ಆದೇಶ ನೀಡಿದ್ದು, ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿಯೂ ಎಚ್ಚರಿಸಿದ್ದಾರೆ.

ಕೆರೆ ಕೋಡಿ ಒಡೆದು ಹಾನಿಗೊಳಗಾಗಿದ್ದ ಪ್ರದೇಶಗಳಿಗೆ ಇಂದು ಭೇಟಿ ಮಾಡಿದ ಯಡಿಯೂರಪ್ಪ ನವರು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಿಡಿಕಾರಿದರು. ಸದ್ಯದ ಮಾಹಿತಿ ಪ್ರಕಾರ ಭಾನುವಾರ ಹುಳಿಮಾವು ಕೆರೆ ಕೋಡಿ ಒಡೆದು 630 ಮನೆಗಳು ಹಾನಿಗೊಳಗಾಗಿವೆ. ಇದರಲ್ಲಿ 319 ಮನೆಗಳು ಭಾಗಶಃ ಹಾಳಾಗಿವೆ.

ಮನೆ ಕಳೆದುಕೊಂಡು ಸಂತ್ರಸ್ತರಾಗಿರುವವರಿಗೆ ಸರ್ಕಾರದ ವತಿಯಿಂದ ಇಂದು ಸಂಜೆಯೊಳಗೆ ಅವರ ಖಾತೆಗೆ 50 ಸಾವಿರ ರೂ. ಪರಿಹಾರವನ್ನು ನೀಡಲಾಗುವುದು. ಉಳಿದಿರುವ ಮನೆಗಳಿಗೆ ವರದಿ ಬಂದ ನಂತರ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು. ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಮುಂದೆ ಇಂತಹ ಅವಘಡಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.

ಖಡಕ್ ಸೂಚನೆ:
ಕೆರೆ ಸಮೀಪದಲ್ಲಿ ಏರಿಯನ್ನು ಭದ್ರವಾಗಿ ಕಟ್ಟಿದರೆ ಇಂತಹ ಅವಘಡಗಳು ಸಂಭವಿಸುವುದಿಲ್ಲ. ಕಾಮಗಾರಿ ನಡೆಯುವಾಗ ಪಾಲಿಕೆಯ ವರು ಹಾಗೂ ಅಧಿಕಾರಿಗಳು ಸ್ಥಳದಲ್ಲಿಯೇ ಇರಬೇಕು. ಇಲ್ಲದಿದ್ದರೆ ಗುತ್ತಿಗೆದಾರರು ಮನಬಂದಂತೆ ಕಟ್ಟುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ:
ಬೆಂಗಳೂರು,ನ.26- ಹುಳಿಮಾವು ಕೆರೆ ಕೋಡಿ ಒಡೆದ ಪ್ರಕರಣದ ಬಗ್ಗೆ ರಾಜ್ಯ ಸರ್ಕಾರ ತನಿಖೆಗೆ ಆದೇಶ ನೀಡಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ತನಿಖೆಗೆ ಆದೇಶಿಸಿ ಶೀಘ್ರದಲ್ಲೇ ವರದಿ ನೀಡಬೇಕೆಂದು ಸೂಚನೆ ಕೊಟ್ಟಿದ್ದಾರೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಹೀಗಾಗಿ ಪಾಲಿಕೆ ಅಧಿಕಾರಿಗಳಿಗೆ ತನಿಖೆ ನಡೆಸಲು ಆದೇಶಿಸಿದ್ದೇನೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದರು. ಮುಂದೆ ಇಂತಹ ಅವಘಡಗಳು ಸಂಭವಿಸದಂತೆ ಎಚ್ಚರವಹಿಸಬೇಕು. ನಗರದಲ್ಲಿರುವ ಕೆರೆ ಕೋಡಿಗಳನ್ನು ಎತ್ತರಕ್ಕೆ ಏರಿಸಬೇಕು. ಏಕಾಏಕಿ ಈ ರೀತಿ ನೀರು ನುಗ್ಗಿ ಅನಾಹುತ ಸಂಭವಿಸಿದರೆ ಯಾರು ಹೊಣೆ? ಎಂದು ಪ್ರಶ್ನಿಸಿದರು.

Comments are closed.