ಕರ್ನಾಟಕ

ಸಿದ್ದರಾಮಯ್ಯ ಭ್ರಷ್ಟಾಚಾರಿಯಲ್ಲ ಎಂದು ಹಾಡಿ ಹೊಗಳಿದ ಎಚ್.ವಿಶ್ವನಾಥ್

Pinterest LinkedIn Tumblr

ಮೈಸೂರು: ವಿಧಾನಸಭೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಭ್ರಷ್ಟಾಚಾರಿ ಅಲ್ಲ, ಒಳ್ಳೆಯ ಆಡಳಿತಗಾರ ಎಂದು ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಹಾಡಿ ಹೊಗಳಿದ್ದಾರೆ.

ಹುಣಸೂರಿನಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಜನನಾಯಕರು. ನಾನು ಕೂಡ ಅವರನ್ನು ಮೆಚ್ಚಿದ್ದೇನೆ. ಹೀಗಾಗಿ ಅವರನ್ನು ಜೆಡಿಎಸ್‍ನಿಂದ ಕಾಂಗ್ರೆಸ್‍ಗೆ ಕರೆದುಕೊಂಡು ಬಂದಿದ್ದೆ, ಮುಖ್ಯಮಂತ್ರಿಯಾಗಲು ಗುಂಪು ಮಾಡಿದ್ದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸಿದ್ದರಾಮಯ್ಯ ಅವರನ್ನು ಕೈಬಿಟ್ಟಾಗ ಈ ರಾಜ್ಯದ ಜನರು ಅವರಿಗೆ ಆಶೀರ್ವಾದ ಮಾಡಿ, ಆಶ್ರಯ ಕೊಟ್ಟರು. ಇದಕ್ಕೆ ನಾವು ಬೆನ್ನೆಲುಬಾಗಿ ನಿಂತಿದ್ದೇವು ಎಂದು ಹೇಳಿದರು.

ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಉತ್ತಮ ಯೋಜನೆಗಳನ್ನು ನೀಡಿದರು. ಹಣಕ್ಕಾಗಿ ಎಂದಿಗೂ ಹಪಾಹಪಿ ಮಾಡಲಿಲ್ಲ. ಸಿದ್ದರಾಮಯ್ಯ ಅವರು ಭ್ರಷ್ಟಾಚಾರಿಯಲ್ಲ, ಉತ್ತಮ ನಾಯಕ. ಅವರನ್ನ ಕಂಡರೆ ಯಾರಿಗೂ ಭಯವಿಲ್ಲ. ನನ್ನನ್ನೂ ಸೇರಿದಂತೆ ಎಲ್ಲರೂ ಸಿದ್ದರಾಮಯ್ಯನವರನ್ನು ಪ್ರೀತಿಸುತ್ತಾರೆ ಎಂದು ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜೆಡಿಎಸ್ ಬಿಟ್ಟ ರೀತಿಯಲ್ಲೇ ಸ್ವಾಭಿಮಾನಕ್ಕಾಗಿ ನಾನು ಕಾಂಗ್ರೆಸ್ ಪಕ್ಷ ಬಿಟ್ಟಿದ್ದೇನೆ. ಈ ಕುರುಬನನ್ನು ಗೆಲ್ಲಿಸಿದ್ದು ನಾವು ಎಂದು ಹಂಗಿಸುತ್ತಿದ್ದರು. ನಿಮ್ಮ ಜಾತಿಯವರು ಮತ ಹಾಕಿ ಗೆಲ್ಲಿಸಿಲ್ಲ ಎಂದು ಜೆಡಿಎಸ್ ಮುಖಂಡು ಹೀಯಾಳಿಸುತ್ತಿದ್ದರು. ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡುವುದಕ್ಕೆ ಹೋದರೆ ಗೇಟ್ ಹತ್ತಿರ ನಿಲ್ಲಿಸುತ್ತಿದ್ದರು ಎಂದು ಅಸಮಾಧಾನ ಹೊರ ಹಾಕಿದರು.

ಜೀವ ಇರುವವರೆಗೂ ಎಚ್.ಡಿ.ದೇವೇಗೌಡರ ಫೋಟೋಗೆ ಪೂಜೆ ಮಾಡುತ್ತೇನೆ. ಅವರ ವಿರುದ್ಧ ಒಂದು ಮಾತು ಕೂಡ ಆಡುವುದಿಲ್ಲ. ನಾನು ಯಾಕೆ ರಾಜೀನಾಮೆ ಕೊಟ್ಟಿದ್ದೇನೆ ಎನ್ನುವುದು ಕ್ಷೇತ್ರದ ಜನತೆಗೆ ಗೊತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್‍ನವರ ಆರೋಪಕ್ಕೆ ಉತ್ತರ ಕೊಡುವುದಿಲ್ಲ ಎಂದು ಹೇಳಿದರು.

Comments are closed.