ಕರ್ನಾಟಕ

ಟಿಕ್​ಟಾಕ್ ಆಂಟಿಯೊಂದಿಗೆ ಸಚಿವ ಮಾಧುಸ್ವಾಮಿ ಫೋಟೋ

Pinterest LinkedIn Tumblr


ಬೆಂಗಳೂರು (ನ. 21): ಇತ್ತೀಚೆಗಷ್ಟೆ ಖತರ್ನಾಕ್​ ಮಹಿಳೆಯೊಬ್ಬಳು ಟಿಕ್​ಟಾಕ್​ನಲ್ಲಿ ಗಂಡಸರನ್ನು ಪರಿಚಯ ಮಾಡಿಕೊಂಡು, ಮದುವೆಯಾಗುತ್ತೇನೆಂದು ನಂಬಿಸಿ ಹಣ ದೋಚುತ್ತಿದ್ದ ವಿಚಾರ ಎಲ್ಲ ಮಾಧ್ಯಮಗಳಲ್ಲೂ ಸುದ್ದಿಯಾಗಿತ್ತು. ಅದೇ ಸುದ್ದಿಗೆ ಆ ಮಹಿಳೆಯ ಫೋಟೋದ ಜೊತೆಗೆ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರ ಫೋಟೋವನ್ನು ಎಡಿಟ್ ಮಾಡಿ ಕರ್ನಾಟಕ ಜೆಡಿಎಸ್ ಸೋಷಿಯಲ್ ಮೀಡಿಯಾದ ಪೇಜ್​ನಲ್ಲಿ ಪೋಸ್ಟ್ ಮಾಡಲಾಗಿತ್ತು.

ಟಿಕ್​ಟಾಕ್ ಆಂಟಿಯ ಫೋಟೋದ ಜೊತೆಗೆ ಸಚಿವ ಮಾಧುಸ್ವಾಮಿ ಫೋಟೋ ಹಾಕಿ, ಹೆಡ್​ಲೈನ್ ಕೂಡ ಎಡಿಟ್ ಮಾಡಲಾಗಿತ್ತು. ‘ಟಿಕ್​ಟಾಕ್​ನಲ್ಲಿ ಪರಿಚಯ ಮಾಡಿಕೊಂಡು ಮದುವೆಯಾಗುತ್ತೇನೆಂದು ಮಾಧುಸ್ವಾಮಿಗೆ 4 ಕೋಟಿ ರೂ. ಪೀಕಿದ ಬ್ಯೂಟಿ’ ಎಂಬ ಹೆಡ್​ಲೈನ್ ಹಾಕಿ ಪೋಸ್ಟ್​ ಮಾಡಲಾಗಿತ್ತು. ನಕಲಿ ಸುದ್ದಿ ಮತ್ತು ಫೋಟೋವನ್ನು ಪೋಸ್ಟ್​ ಮಾಡಿರುವ ಜೆಡಿಎಸ್​ ವಿರುದ್ಧ ಬಿಜೆಪಿ ನಾಯಕರು ದೂರು ನೀಡಿದ್ದು, ಸಚಿವರ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಟಿಕ್​ಟಾಕ್ ಚೆಲುವೆಯ ಎರಡು ಫೋಟೋಗಳು ಇರುವ ಕಡೆ ಸಚಿವ ಮಾಧುಸ್ವಾಮಿಯವರ ಫೋಟೊ ಹಾಕಿ ಟ್ವೀಟ್ ಮಾಡಿರುವ ಜೆಡಿಎಸ್​ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದಿಂದ ದೂರು ನೀಡಲಾಗಿದೆ. ಚಿಕ್ಕನಾಯಕನ ಹಳ್ಳಿ ಬಿಜೆಪಿ ಸಾಮಾಜಿಕ ಜಾಲ ವಿಭಾಗದ ಸಂಚಾಲಕ ಯೋಗೇಶ್ವರ್ ಅವರಿಂದ ಬೆಂಗಳೂರಿನ ಸೈಬರ್ ಕ್ರೈಂ ಪೋಲೀಸರಿಗೆ ದೂರು ನೀಡಲಾಗಿದೆ.

ಸಚಿವರ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿ ಸಾರ್ವಜನಿಕವಾಗಿ ಅವರ ಹೆಸರು ಕೆಡಸುವ ಪ್ರಯತ್ನ ಮಾಡಲಾಗುತ್ತಿದೆ. ಸಚಿವ ಮಾಧುಸ್ವಾಮಿ ಅವರು ರಾಜಕೀಯವಾಗಿ ಬೆಳೆಯುವುದನ್ನು ಸಹಿಸದವರು ಅವರ ಮೇಲೆ ಆರೋಪ ಹೊರಿಸಿ ವಿಕೃತ ಸಂತೋಷ ಪಡುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೇ ಸಮಾಜದಲ್ಲಿ ಅವರ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಕಲಿ ಸುದ್ದಿ ಪ್ರಕಟಿಸಿರುವ ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.

Comments are closed.