ಕರ್ನಾಟಕ

ಕ್ಷಿಪ್ರ ವೇಗದ ಅಂತರ್ಜಾಲ ಸಂಪರ್ಕ ಕಲ್ಪಿಸಲು ವೈಫೈ ಹಾಟ್‌ಸ್ಪಾಟ್‌ ಶ್ರೀಘ್ರದಲ್ಲೇ ಸ್ಥಾಪನೆ

Pinterest LinkedIn Tumblr

ಬೆಂಗಳೂರು: ಬೆಂಗಳೂರಿನ ವಿವಿಧ ಭಾಗಗಳಲ್ಲಿ ವೈಫೈ ಸ್ಪಾಟ್‌ ಸ್ಥಾಪಿಸಿ, ದಿನಕ್ಕೆ ಒಂದು ತಾಸು ಉಚಿತ ಇಂಟರ್ನೆಟ್‌ ಸೇವೆ ಒದಗಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಬುಧವಾರ ಘೋಷಿಸಿದರು. ಬೆಂಗಳೂರು ಅರಮನೆಯಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್‌ ಸಮಿಟ್‌ನ ಕೊನೆಯ ದಿನ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಅವರು ಈ ವಿಷಯ ಘೋಷಿಸಿದರು.

“ನಗರದ ಜನರ ಬಹುದಿನಗಳ ಬೇಡಿಕೆ ವೈಫೈ ಸ್ಪಾಟ್ ಅಳವಡಿಕೆಗೆ ಕಾಲ ಕೂಡಿಬಂದಿದೆ. ನಗರದ 800 ಕಿ.ಮೀ. ವ್ಯಾಪ್ತಿಯಲ್ಲಿ ಕ್ಷಿಪ್ರ ವೇಗದ ಅಂತರ್ಜಾಲ ಸಂಪರ್ಕ ಕಲ್ಪಿಸಲು ವೈಫೈ ಹಾಟ್‌ಸ್ಪಾಟ್‌ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಡಿಜಿಟಲ್‌ ಕರ್ನಾಟಕದ ಮೂಲಕ ಡಿಜಿಟಲ್‌ ಇಂಡಿಯಾದ ಕನಸು ಸಾಕಾರಗೊಳಿಸುವುದು ನಮ್ಮ ಗುರಿ. ಪ್ರತಿಯೊಬ್ಬರಿಗೂ ವೈಫೈ ಸೌಲಭ್ಯ ಸಿಗುವಂತಾಗಬೇಕು. ನಗರದಲ್ಲಿ ಇನ್ನು ಮುಂದೆ ಪ್ರತಿಯೊಬ್ಬರಿಗೂ ಕನಿಷ್ಠ ಒಂದು ತಾಸು ಉಚಿತ ಇಂಟರ್‌ನೆಟ್‌ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ 4000 ವೈಫ್‌ಐ ಸ್ಪಾಟ್‌ಗಳನ್ನು ಸ್ಥಾಪಿಸಲಾಗುವುದು. ಸ್ಮಾರ್ಟ್‌ ಸಿಟಿಗಾಗಿ ವೈಫೈ ಟವರ್‌, ಕ್ಯಾಮರಾ ಸೇರಿದಂತೆ ಎಲ್ಲ ಸೌಕರ್ಯಯವನ್ನು ಒದಗಿಸಲು 100 ಕೋಟಿ ರೂ. ವೆಚ್ಚವಾಗುವುದು,” ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.

“ಇಂಟರ್ನೆಟ್‌ ಸೌಲಭ್ಯ ಒದಗಿಸುವ ಸಂಬಂಧ ಆಯಕ್ಟ್‌ ಸಂಸ್ಥೆ ಜತೆ ಸರ್ಕಾರ ಮಾತುಕತೆ ನಡೆಸಿತ್ತು. ಸಮಾಜ ಸೇವೆ ದೃಷ್ಟಿಯಿಂದ ಇಂಟರ್ನೆಟ್‌ ಸೇವೆ ಒದಗಿಸಲು ಸಂಸ್ಥೆ ಮುಂದೆ ಬಂದಿದೆ ಹೊರತು ಪ್ರಚಾರದ ಉದ್ದೇಶದಿಂದ ಅಲ್ಲ. ಕಾನೂನು ಚೌಕಟ್ಟಿನ ಪರಿಮಿತಿಯಲ್ಲಿ, ಪಾಲಿಕೆ ವತಿಯಿಂದ ವೈಫೈ ಸ್ಟಾಟ್‌ಗಳನ್ನು ಅಳವಡಿಸಲಾಗುವುದು. ನಾವು ಇದಕ್ಕೆ ಯಾವುದೇ ಹಣ ವ್ಯಯಿಸುತ್ತಿಲ್ಲ. ನಾಲ್ಕು ವರ್ಷಗಳ ಬೇಡಿಕೆ ಈಗ ನೆರವೇರುತ್ತಿದೆ. ಯೋಜನೆ ಪೂರ್ಣಗೊಳ್ಳಲು 9 ತಿಂಗಳು ಬೇಕಾಗುತ್ತದೆ” ಎಂದು ಸಚಿವರು ವಿವರಿಸಿದರು.

1 GB ಸ್ಪೀಡ್‌ ಇಂಟರ್ನೆಟ್‌:
“ಬೆಂಗಳೂರನ್ನು ಡಿಜಿಟಲ್‌ ಸಿಟಿ ಮಾಡುವ ನಿಟ್ಟಿನಲ್ಲಿ ದೊರೆತಿರುವ ಈ ಅವಕಾಶಕ್ಕೆ ಧನ್ಯವಾದ ಹೇಳುತ್ತೇವೆ. ಹಲವಾರು ಸಂದರ್ಭಗಳಲ್ಲಿ ನಾವು ಸರ್ಕಾರದ ಜತೆ ಕೈ ಜೋಡಿಸಿದ್ದೇವೆ. ಡಿಜಿಟಲ್‌ ಸಂಪರ್ಕದ ಮೂಲಕ ನಗರದ ಜನತೆಗೆ ನಮ್ಮ ಸೇವೆ ಒದಗಿಸಲು ಮುಂದಾಗಿದ್ದೇವೆ. 1 GB ಸ್ಪೀಡ್‌ ಇಂಟರ್ನೆಟ್‌ ಒದಗಲಿಸಲು ನಾವು ಬದ್ಧ. ಉಪ ಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರ ಮಾರ್ಗದರ್ಶನದಲ್ಲಿ ಬಿಬಿಎಂಪಿ ಸಹಯೋಗದಲ್ಲಿ ನಗರದಲ್ಲಿ ಸಂಪರ್ಕ ಕ್ರಾಂತಿ ನಡೆಯಲಿದೆ. ಈ ಮೂಲಕ ನಗರದ ಜನ ಜೀವನದಲ್ಲಿ ಬದಲಾವಣೆ ತರುವ ಉದ್ದೇಶ ನಮ್ಮದು,” ಎಂದು ಆಕ್ಟ್‌ ಸಿಇಓ ಬಾಲಾ ಹೇಳಿದ್ದಾರೆ.

Comments are closed.