ಕರಾವಳಿ

ಮಂಗಳೂರು ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿರುವ ಶಶಿಧರ ಹೆಗ್ಡೆಯವರಿಂದ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ; ಮಾಜಿ ಸಚಿವ ರೈ ವಿಶ್ವಾಸ

Pinterest LinkedIn Tumblr

ಸತತ ಗೆಲುವಿನ ಸರದಾರ ಎಂ.ಶಶಿಧರ ಹೆಗ್ಡೆ ಯವರ ಕೃತಜ್ಞತಾ ಸಭೆ 

ಮಂಗಳೂರು, ನವೆಂಬರ್.21 : ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಅನುಭವ ಹೊಂದಿರುವ ಸರಳ ಸಜ್ಜನಿಕೆಯ ಜನಸ್ನೇಹಿ ರಾಜಕಾರಣಿ ಯಾದ ಎಂ.ಶಶಿಧರ ಹೆಗ್ಡೆಯವರು ಅಭಿವೃದ್ಧಿಪರ ಚಟುವಟಿಕೆಗಳಿಂದ ಮಂಗಳೂರಿನಲ್ಲಿ ಹೆಸರುಗಳಿಸಿದವರು. ಎಲ್ಲರೊಡನೆ ಪ್ರೀತಿ ವಿಶ್ವಾಸದೊಂದಿಗೆ ಒಡನಾಟ ಹೊಂದಿರುವ ಹೆಗ್ಡೆಯವರ ಗೆಲುವು ನಿರೀಕ್ಷಿತವಾಗಿತ್ತು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಬುಧವಾರ ಸಂಜೆ ನಗರದ ದೇರೆಬೈಲ್ ಚರ್ಚ್ ಸಭಾಂಗಣದಲ್ಲಿ ನಡೆದ ಮಂಗಳೂರು ಮಹಾನಗರ ಪಾಲಿಕೆಯ ಚುನಾಚಣೆಯಲ್ಲಿ ಸತತವಾಗಿ 5ನೇ ಬಾರಿಗೆ ಗೆಲುವು ಪಡೆದ ದೇರೆಬೈಲ್ 24ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮೇಯರ್ ಎಂ.ಶಶಿಧರ ಹೆಗ್ಡೆ ಯವರ ಕೃತಜ್ಞತಾ ಸಭೆಯಲ್ಲಿ ಅವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದರು.

ತನ್ನ ವಿಧ್ಯಾರ್ಥಿ ಜೀವನದಿಂದಲೇ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಿಂದ ಆಕರ್ಷಿತಗೊಂಡು ಆಲ್ ಕಾಲೇಜ್ ಸ್ಟೂಡೆಂಟ್ ಯೂನಿಯನ್‌ನಲ್ಲಿ ವಿಧ್ಯಾರ್ಥಿ ನಾಯಕನಾಗಿ ಬೆಳೆದು ಯುವ ಕಾಂಗ್ರೆಸ್‌ನ ನಾಯಕನಾಗಿ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಹೆಗ್ಡೆಯವರು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ಮಂಗಳೂರಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಮಹಾನಗರ ಪಾಲಿಕೆಯ ಆಡಳಿತದಲ್ಲಿ ಹೆಚ್ಚು ಅನುಭವ ಹೊಂದಿರುವ ಹಾಗೂ ಮಂಗಳೂರು ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿರುವ ಎಂ ಶಶಿಧರ ಹೆಗ್ಡೆಯವರಿಂದ ಮುಂದಿನ ದಿನಗಳಲ್ಲಿ ಮಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗೆ ಅವಶ್ಯವಿರುವ ಕೆಲಸಕಾರ್ಯಗಳು ನಡೆಯಲಿದ್ದು, ಈ ಜನಪರ ಕೆಲಸಗಳಿಗೆ ತಾವೆಲ್ಲಾ ಕೈಜೋಡಿಸುವ ಮೂಲಕ ಸಹಕಾರ ನೀಡಬೇಕು ಎಂದು ರಮಾನಾಥ ರೈ ಹೇಳಿದರು.

ದೇರೆಬೈಲ್ ಚರ್ಚ್‌ನ ಪ್ರಧಾನ ಗುರುಗಳಾದ ವಂದನೀಯ ಓಸ್ಟಿನ್ ಪೇರಿಸ್ ಆಶೀರ್ವಚನ ನೀಡಿದರು.

ಪಾಲಿಕೆ ಚುನಾಚಣೆಯಲ್ಲಿ ಸತತವಾಗಿ 5ನೇ ಬಾರಿಗೆ ಗೆಲುವು ಪಡೆದ ದೇರೆಬೈಲ್ 24ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮೇಯರ್ ಎಂ.ಶಶಿಧರ ಹೆಗ್ಡೆಯವರು ಮತದಾರ ಬಂಧುಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಕ್ಷೇತ್ರದ ಅಭಿವೃದ್ಧಿಕಾರ್ಯಗಳಿಗೆ ಹೆಚ್ಚು ಒತ್ತು ನೀಡುವದರ ಜೊತೆಗೆ ನಾಗರೀಕರಿಗೆ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಹೆಚ್ಚಿನ ಅದ್ಯತೆ ನೀಡುವುದಾಗಿ ಈ ಸಂದರ್ಭದಲ್ಲಿ ಶಶಿಧರ ಹೆಗ್ಡೆಯವರು ಭರವಸೆ ನೀಡಿದರು.

ಮಾಜಿ ಶಾಸಕ ಜೆ.ಆರ್.ಲೋಬೋ, ದೇರೆಬೈಲ್ ಚರ್ಚ್‌ನ ಪಾಲನಾ ಪರಿಷದ್ ಉಪಾಧ್ಯಕ್ಷರಾದ ಎಡ್ವರ್ಡ್ ಕೊಯಿಲೋ, ಬಿಜೈ ಕಾಪಿಕಾಡ್,  ಬಿಜೈ ಕಾಪಿಕಾಡ್ ಶ್ರೀ ಗುರು ವೈದ್ಯನಾಥ ಶ್ರೀ ಚಾಮುಂಡೇಶ್ವರಿ ದೈವಸ್ಥಾನದ ಅರ್ಚಕರಾದ ನಾರಾಯಣ, ಬಿಜೈ ಕಾಪಿಕಾಡ್ ಶ್ರೀ ಕೋಟೆದ ಬಬ್ಬು ಸ್ವಾಮಿ ದೈವಸ್ಥಾನದ ಗುರಿಕಾರರಾದ ರಾಜೇಂದ್ರ ಕಿರೋಡಿಯಾನ್, ಬಿಜೈ ಕಾಪಿಕಾಡ್  ಶ್ರೀ ಚಾಮುಂಡೇಶ್ವರಿ ದೈವಸ್ಥಾನದ ಅರ್ಚಕರಾದ ಪ್ರಜ್ವಲ್ ಭಟ್, ಮಾಜಿ ಮೇಯರ್ ಗಳಾದ ಭಾಸ್ಕರ್.ಕೆ, ಹರಿನಾಥ್, ಮನಪಾ ಸದಸ್ಯರಾದ ಲ್ಯಾನ್ಸಿ ಲೋಟೋ ಪಿಂಟೋ, ಅಬ್ದುಲ್ ಲತೀಫ್, ವಾರ್ಡ್ ಉಸ್ತುವಾರಿ ಶೇಖರ್ ಶೆಟ್ಟಿ, ಶಿರ್ಡಿ ಸಾಯಿಬಾಬ ಮಂದಿರದ ಪ್ರಮುಖರಾದ ವಿಶ್ವಾಸ್ ದಾಸ್ ಮುಂತಾದವರು ಅತಿಥಿಗಳಾಗಿದ್ದರು.

ದೇರಬೈಲ್ 24ನೇ ವಾರ್ಡಿನ ವತಿಯಿಂದ ವಾರ್ಡ್ ಅಧ್ಯಕ್ಷ ರಾಜೇಂದ್ರ ಚಿಲಿಂಬಿ ನೇತೃತ್ವದಲ್ಲಿ ಎಂ ಶಶಿಧರ ಹೆಗ್ಡೆ ಯವರನ್ನು ಸನ್ಮಾನಿಸಲಾಯಿತು. ಅದೇ ರೀತಿ ದೇರೆಬೈಲ್ ಉತ್ತರ 17ನೇ ವಾರ್ಡ್ ವತಿಯಿಂದ ಮತ್ತು ವಿವಿಧ ಸಂಘ ಸಂಸ್ಥೆಗಳು, ದೈವಸ್ಥಾನಗಳ ವತಿಯಿಂದ ಎಂ ಶಶಿಧರ ಹೆಗ್ಡೆ ಯವರನ್ನು ಗೌರವಿಸಲಾಯಿತು.

ವಾರ್ಡ್ ಅಧ್ಯಕ್ಷ ರಾಜೇಂದ್ರ ಚಿಲಿಂಬಿ ಕಾರ್ಯಕ್ರಮ ನಿರೂಪಿಸಿದರು. ದಿವಾಕರ್ ಕೊಟ್ಟಾರಕ್ರಾಸ್ ಸ್ವಾಗತಿಸಿದರು. ಸಂದೇಶ್ ಮಸ್ಕರೇನಸ್ ಕೊಟ್ಟಾರ ಕ್ರಾಸ್ ವಂದನಾರ್ಪಣೆ ಸಲ್ಲಿಸಿದರು.

ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್ ( Mob :9035089084)

Comments are closed.